2004ರ ಡಿಕೆಶಿಯ ಮಾಸ್ಟರ್ ಪ್ಲ್ಯಾನ್ ಬಳಸಿ ಬಿಜೆಪಿ ಪ್ರತ್ಯಸ್ತ್ರ!

ಬೆಂಗಳೂರು: ಚುನಾವಣೆಗೆ ಅಖಾಡದಲ್ಲಿ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಎಲ್ಲ ಪಕ್ಷಗಳು ಅತ್ಯಂತ ಜಾಗರೂಕತೆಯಿಂದ ಕೆಲಸ ನಿರ್ವಹಿಸುತ್ತಿದೆ. ಹೀಗಾಗಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಸಚಿವ ಡಿ.ಕೆ.ಶಿವಕುಮಾರ್ 2004ರಲ್ಲಿ ಬಳಸಿದ ಚುನಾವಣಾ ತಂತ್ರವನ್ನೇ ಬಿಜೆಪಿ, ಜೆಡಿಎಸ್ ಮೇಲೆ ಪ್ರಯೋಗಿಸಲು ಮುಂದಾಗಿದೆ ಎಂಬ ಮಾಹಿತಿ ಪಕ್ಷದ ಮೂಲಗಳು ತಿಳಿಸಿವೆ.

2004ರ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಕೇರಳಕ್ಕೆ ತೆರಳಿ ಮಾಜಿ ಪ್ರಧಾನಿ ದೇವೇಗೌಡರನ್ನ ಕನಕಪುರದಲ್ಲಿ ಸೋಲಿಸಬೇಕಾದ್ರೆ ಮಹಿಳಾ ಅಭ್ಯರ್ಥಿ ಹಾಕಬೇಕು ಎಂಬುದನ್ನು ಜ್ಯೋತಿಷಿಗಳ ಸಲಹೆ ಪಡೆದಿದ್ದರು. ಸಲಹೆ ಮೇರೆಗೆ ತೇಜಸ್ವಿನಿ ರಮೇಶ್ ಅವರನ್ನು ಡಿ.ಕೆ.ಶಿವಕುಮಾರ್ ಕಣಕ್ಕಿಳಿಸಿದ್ದರು. ಕಾಂಗ್ರೆಸ್‍ನ ತೇಜಸ್ವಿನಿ ರಮೇಶ್ ವಿರುದ್ಧ ಮಾಜಿ ಪ್ರಧಾನಿಗಳು ಸೋಲು ಕಂಡಿದ್ದರು. ಈಗ ಇದೇ ತಂತ್ರಗಾರಿಕೆಯನ್ನ ಬಿಜೆಪಿಯ ನಾಯಕ ಸಿ.ಪಿ.ಯೋಗೇಶ್ವರ್ ಪ್ರಯೋಗಿಸಿದ್ದು ಪುತ್ರಿ ನಿಶಾರನ್ನು ಬೆಂಗಳೂರು ಗ್ರಾಮಾಂತರದಿಂದ ಅಭ್ಯರ್ಥಿ ಮಾಡುವಂತೆ ಹೈಕಮಾಂಡ್ ಗೆ ತಿಳಿಸಿದ್ದರು. ಇತ್ತ ನಿಶಾ ಯೋಗೇಶ್ವರ್ ಸಹ ಸ್ಥಳೀಯ ಮಟ್ಟದಲ್ಲಿ ಕೆಲ ಸಭೆಗಳನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಲಿರುವ ಡಿ.ಕೆ.ಸುರೇಶ್ ವಿರುದ್ಧ ನಿಶಾ ಯೋಗೇಶ್ವರ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 2004ರಲ್ಲಿ ಡಿ.ಕೆ.ಶಿವಕುಮಾರ್ ಪ್ರಯೋಗಿಸಿದ ಬಾಣವೇ ಸೋದರನಿಗೆ ತಿರುಗುಬಾಣವಾಗುತ್ತ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಸಿ.ಪಿ.ಯೋಗೇಶ್ವರ್ ಸಹ ಜ್ಯೋತಿಷಿಗಳ ಸಲಹೆಯ ಮೇರೆಗೆ ನಿಶಾರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರದಲ್ಲಿ ನಿಶಾರ ಸ್ಪರ್ಧೆಯಿಂದ ಡಿ.ಕೆ.ಸುರೇಶ್ ರನ್ನು ಕಟ್ಟಿ ಹಾಕಲು ಬಿಜೆಪಿ ಪ್ಲ್ಯಾನ್ ಮಾಡಿಕೊಂಡಿದೆ. ಅತ್ತ ಮಂಡ್ಯದಲ್ಲಿ ಸುಮಲತಾರಿಗೆ ಪರೋಕ್ಷವಾಗಿ ಬೆಂಬಲ ಸೂಚಿಸುವ ಮೂಲಕ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಲು ಬಿಜೆಪಿ ಚಿಂತನೆ ನಡೆಸಿದೆ. ಈ ಮೂಲಕ ಮಹಿಳಾ ಅಭ್ಯರ್ಥಿಗಳ ಮೂಲಕವೇ ಮೈತ್ರಿ ಸರ್ಕಾರದ ಬೆನ್ನೆಲುಬು ಆಗಿರುವ ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಕುಮಾರಸ್ವಾಮಿಯನ್ನು ಕಟ್ಟಿಹಾಕಲು ಎಲ್ಲ ರೀತಿಯ ಸಿದ್ಧತೆಯಲ್ಲಿ ಬಿಜೆಪಿ ತೊಡಗಿಕೊಂಡಿದೆ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ