ಪಣಜಿ, ಮಾ.20-ಗೋವಾದ ಮುಖ್ಯಮಂತ್ರಿಯಾಗಿ ನಿನ್ನೆಯಷ್ಟೆ ಅಧಿಕಾರ ಸ್ವೀಕರಿಸಿದ ಪ್ರಮೋದ್ ಸಾವಂತ್, ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಇಂದು ಬೆಳಗ್ಗೆ 11.30ಕ್ಕೆ ಸಮಾವೇಶಗೊಂಡ ಗೋವಾ ವಿಧಾನಸಭೆ ಅಧಿವೇಶನದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ನೂತನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿಶ್ವಾಸ ಮತ ಯಾಚನೆ ಮಾಡಿದರು.
20 ಮಂದಿ ಶಾಸಕರು ಪ್ರಮೋದ್ ಸಾವಂತ್ ಅವರಿಗೆ ಮತ ಹಾಕಿದರು. ಈ ಮೂಲಕ ನೂತನ ಮುಖ್ಯಮಂತ್ರಿ ವಿಶ್ವಾಸಮತವನ್ನು ಗಳಿಸಿದರು. ವಿರೋಧ ಪಕ್ಷವಾದ ಕಾಂಗ್ರೆಸ್ ಸೇರಿ 15ಮತಗಳು ವಿಶ್ವಾಸ ಮತದ ವಿರುದ್ಧವಾಗಿ ಚಲಾವಣೆಗೊಂಡವು.
ಉತ್ತರ ಗೋವಾದ ಸಂಕಲೀಮ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಪ್ರಮೋದ್ ಸಾವಂತ್ ಅವರು, ಮನೋಹರ್ ಪರಿಕ್ಕರ್ ಅವರ ಆಪ್ತರಾಗಿದ್ದರು.
ವಿಧಾನಸಭೆಯ ಸ್ಪೀಕರ್ ಆಗಿ ಕೆಲಸ ಮಾಡುತ್ತಿದ್ದರು. ಮನೋಹರ್ ಪರಿಕ್ಕರ್ ಅವರ ಅಕಾಲಿಕ ನಿಧನದ ನಂತರ ಪ್ರಮೋದ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ನಿನ್ನೆ ನಡೆದ ಬಿರುಸಿನ ಚಟುವಟಿಕೆಗಳಲ್ಲಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
40 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಗೋವಾದಲ್ಲಿ ಪ್ರಸ್ತುತ 36 ಮಂದಿ ಶಾಸಕರಿದ್ದಾರೆ. ಇಬ್ಬರು ಶಾಸಕರು ನಿಧನರಾಗಿದ್ದು, ಕಾಂಗ್ರೆಸ್‍ನ ಇಬ್ಬರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ವಿಧಾನಸಭೆಯ ಸಂಖ್ಯಾಬಲ 36ಕ್ಕೆ ಕುಸಿದಿದ್ದು, ವಿಶ್ವಾಸಮತ ಯಾಚನೆಗೆ 18 ಶಾಸಕರು ಬೇಕಿತ್ತು.
ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿಯ ತಲಾ ಮೂರು ಮಂದಿ, ಪಕ್ಷೇತರರು ಮೂರು ಮಂದಿ ಸೇರಿ ಒಟ್ಟು 21 ಮಂದಿ ಶಾಸಕರ ಬಲ ತಮಗಿದೆ ಎಂದು ಬಿಜೆಪಿಯ ನೂತನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೊಂಡಿದ್ದರು. ಅದು ವಿಧಾನಸಭೆಯಲ್ಲಿಂದು ಸಾಬೀತಾಗಿದೆ.
ಮೂಲತಃ ಆರ್‍ಎಸ್‍ಎಸ್ ಕಾರ್ಯಕರ್ತರಾದ ಪ್ರಮೋದ್ ಸಾವಂತ್ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಮೈಕಲ್ ಲೋಬೋ ಗೋವಾ ವಿಧಾನಸಭೆಯ ಹಂಗಾಮಿ ಸಭಾಪತಿಯಾಗಿ ನೇಮಕಗೊಂಡಿದ್ದಾರೆ.