ಬೆಂಗಳೂರು, ಮಾ.20-ನಗರದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣವಾಗಲು ಸಹಕಾರ ನೀಡುತ್ತಿರುವ ಬಿಬಿಎಂಪಿ ಇಂಜಿನಿಯರ್ಗಳ ವಿರುದ್ಧ ಕ್ರಮಕೈಗೊಳ್ಳಲು ನಮಗೆ ಅಧಿಕಾರ ನೀಡುವಂತೆ ಬಿಎಂಟಿಎಫ್ ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಇಂಜಿನಿಯರ್ಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಬಿಎಂಟಿಎಫ್ ಪೊಲೀಸರಿಗೆ ಅಧಿಕಾರವಿಲ್ಲ ಎಂದು ರಾಜ್ಯ ಉಚ್ಚ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ದ ಬಿಎಂಟಿಎಫ್ ಪೊಲೀಸರು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಕಳೆದ 2013ರಲ್ಲಿ ಈ ಕಾರ್ಯಾಚರಣೆಗಿಳಿದಿದ್ದ ಬಿಎಂಟಿಎಫ್ ಪೊಲೀಸರು ನಗರದಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ಪರಿಶೀಲನೆ ಕೈಗೊಂಡಿದ್ದರು.
ಆಗ ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ್ದ ಸಂಬಂಧಪಟ್ಟ ಬಿಬಿಎಂಪಿಯ 205 ಇಂಜಿನಿಯರ್ಗಳ ವಿರುದ್ಧ ಬಿಎಂಟಿಎಫ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಯಾವುದೇ ಅನಧಿಕೃತ ಕಟ್ಟಡ ನಿರ್ಮಾಣವಾಗದಂತೆ ನೋಡಿಕೊಳ್ಳುವ ಹೊಣೆ ಆಯಾ ವಲಯದ ಇಂಜಿನಿಯರ್ಗಳಿಗೆ ಸಂಬಂಧಿಸಿದ್ದು, ಹಾಗಾಗಿ ಇಂಜಿನಿಯರುಗಳೇ ತಪ್ಪಿತಸ್ಥರು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಆದರೆ ಬಿಬಿಎಂಪಿ ಇಂಜಿನಿಯರ್ ಜಿ.ಡಿ.ಜಯರಾಂ ಮತ್ತಿತರರು ಬಿಎಂಟಿಎಫ್ನ ನಿರ್ಧಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿ ಬಿಎಂಟಿಎಫ್ ಪೊಲೀಸರಿಗೆ ಇಂಜಿನಿಯರ್ಗಳ ವಿರುದ್ಧ ಕ್ರಮಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ವಾದಿಸಿದ್ದರು.
ವಾದ-ವಿವಾದ ಆಲಿಸಿದ ರಾಜ್ಯ ಉಚ್ಚ ನ್ಯಾಯಾಲಯ 10.10.2013ರಲ್ಲಿ ಅದೇಶ ಹೊರಡಿಸಿ ಅನಧಿಕೃತ ಕಟ್ಟಡ ನಿರ್ಮಾಣದ ಹೊಣೆ ಹೊತ್ತ ಇಂಜಿನಿಯರ್ಗಳ ವಿರುದ್ಧ ಪ್ರಕರಣ ದಾಖಲಿಸಲು ಬಿಎಂಟಿಎಫ್ಗೆ ಅಧಿಕಾರ ಇಲ್ಲ ಎಂದು ತೀರ್ಪು ನೀಡಿತ್ತು.
ಈ ತೀರ್ಪಿನ ನಂತರ ಬಿಎಂಟಿಎಫ್ ಹಲ್ಲಿಲ್ಲದ ಹಾವಿನಂತಾಗಿತ್ತು.ಆದರೆ ಇದೀಗ ಎಚ್ಚೆತ್ತುಕೊಂಡಿರುವ ಬಿಎಂಟಿಎಫ್ ಪೊಲೀಸರು ಸರ್ಕಾರಿ ಸ್ವತ್ತು ಕಬಳಿಸುವವರ ವಿರುದ್ಧ ಹಾಗೂ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಸಹಕರಿಸಿದ ಇಂಜಿನಿಯರ್ಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಬಿಎಂಟಿಎಫ್ಗೆ ಅಧಿಕಾರ ಇದೆ.ಈ ಕುರಿತು ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಮರುಪರಿಶೀಲಿಸಬೇಕೆಂದು ಈಗ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಬಿಎಂಟಿಎಫ್ ಸಲ್ಲಿಸಿದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ಸರ್ವೋಚ್ಚ ನ್ಯಾಯಾಲಯ ವಾದ-ವಿವಾದ ನಡೆಸಿ ಮತ್ತೆ ಯಾವ ರೀತಿಯ ತೀರ್ಪು ನೀಡುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.