ಬೆಂಗಳೂರು, ಮಾ.20-ಇಂದು ಬೆಳಗ್ಗೆ ಪದ್ಮನಾಭನಗರದ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಆಗಮಿಸಿದ ಜಮೀರ್ ಅಹಮ್ಮದ್ ಖಾನ್, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಜಿ.ಎ.ಭಾವಾ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕುರಿತಂತೆ ಸಮಾಲೋಚನೆ ನಡೆಸಿದರು.
ಬೆಂಗಳೂರು ಉತ್ತರ ಕ್ಷೇತ್ರದಿಂದ ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೆ ಗೆಲ್ಲಬಹುದೆಂಬ ಗಂಭೀರ ಚರ್ಚೆ ನಡೆಸಿದರು. ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳು ಕಾಂಗ್ರೆಸ್‍ಗೆ ದೊರೆತಿದ್ದರೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಜೆಡಿಎಸ್‍ಗೆ ದೊರೆತಿದೆ. ಇನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಂತಿಮಗೊಂಡಿಲ್ಲ. ಈ ಕ್ಷೇತ್ರದಿಂದ ಸ್ಪರ್ಧಿಸುವಂತೆ ಜೆಡಿಎಸ್ ಪಕ್ಷದ ಶಾಸಕರು, ಮುಖಂಡರು ದೇವೇಗೌಡರನ್ನು ಒತ್ತಾಯಿಸಿದ್ದರು.ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರ ಅಭಿಪ್ರಾಯವನ್ನು ದೇವೇಗೌಡರು ಪಡೆದಿದ್ದಾರೆ.
ಭೇಟಿಯ ನಂತರ ಸಚಿವ ಜಮೀರ್ ಅಹಮ್ಮದ್ ಖಾನ್ ಮಾತನಾಡಿ, ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿದ್ದು, ದೇವೇಗೌಡರು ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮನವಿ ಮಾಡಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸಿದರೆ, ಬೆಂಗಳೂರು ದಕ್ಷಿಣ ಮತ್ತು ಕೇಂದ್ರದ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಹೆಚ್ಚು ಅನುಕೂಲವಾಗುತ್ತದೆ.ದೇವೇಗೌಡರನ್ನು ಭಾರೀ ಅಂತರದಿಂದ ಗೆಲ್ಲಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ದೇವೇಗೌಡ ಅವರಿಗೆ ಬೇರೆ ಕ್ಷೇತ್ರಗಳಿಂದಲೂ ಸ್ಪರ್ಧಿಸುವಂತೆ ಒತ್ತಡಗಳಿವೆ ಎಂದ ಅವರು, ತಾವೂ ಸೇರಿದಂತೆ ಬೆಂಗಳೂರು ಉತ್ತರ ಕ್ಷೇತ್ರದ ಶಾಸಕರು, ಕಾರ್ಯಕರ್ತರು ದೇವೇಗೌಡರ ಗೆಲುವಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ತುಮಕೂರಿನಿಂದ ಸ್ಪರ್ಧೆಗೆ ಮನವಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ದೇವೇಗೌಡರು ಗುಟ್ಟು ಬಿಟ್ಟುಕೊಡದೆ ಇರುವುದರಿಂದ ತುಮಕೂರು ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಒತ್ತಡ ಹೆಚ್ಚಾಗಿದೆ.
ಮಾಜಿ ಶಾಸಕ ಎಚ್.ನಿಂಗಪ್ಪ ನೇತೃತ್ವದ ತುಮಕೂರು ಕ್ಷೇತ್ರದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ನಿಯೋಗ ಇಂದು ದೇವೇಗೌಡರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ.
ತುಮಕೂರು ಕ್ಷೇತ್ರದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಗೌಡರು, ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಯಾವ ರೀತಿ ಪರಿಸ್ಥಿತಿ ಇದೆ ಎಂಬ ಮಾಹಿತಿ ಪಡೆದುಕೊಂಡಿದ್ದಾರೆ.
ದೇವೇಗೌಡರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿಂಗಪ್ಪ, ತುಮಕೂರು ಕ್ಷೇತ್ರದಿಂದಲೇ ದೇವೇಗೌಡರು ಸ್ಪರ್ಧಿಸಬೇಕೆಂದು ಮನವಿ ಮಾಡಿದ್ದೇವೆ.
ತುಮಕೂರಿನ ಬಗ್ಗೆ ಅವರಿಗೆ ಹೆಚ್ಚು ಪ್ರೀತಿ ಇದೆ. ಚರ್ಚೆ ಮಾಡಿ ನಿರ್ಧಾರ ಮಾಡುವುದಾಗಿ ಗೌಡರು ಹೇಳಿದ್ದಾರೆ.ದೇವೇಗೌಡರಿಗೆ ಯಾವ ಗಂಗೆಯ ಶಾಪವೂ ಇಲ್ಲ.
ದೇವೇಗೌಡರಿಂದಲೇ ತುಮಕೂರಿಗೆ ಹೇಮಾವತಿ ನೀರು ಬಂದಿದೆ. ರಾಜಕೀಯ ದುರುದ್ದೇಶದಿಂದ ಗೌಡರಿಗೆ ಗಂಗೆಯ ಶಾಪ ಎಂದು ಆರೋಪಿಸುತ್ತಿದ್ದಾರೆ ಎಂದರು.
ದೇವೇಗೌಡರಲ್ಲದೆ ಯಾರೇ ಅಭ್ಯರ್ಥಿಯಾದರೂ ತುಮಕೂರು ಕ್ಷೇತ್ರದಲ್ಲಿ ನಾವು ಬೆಂಬಲ ನೀಡುತ್ತೇವೆ. ಸಂಸದ ಮುದ್ದಹನುಮೇಗೌಡ ಅವರು ಜೆಡಿಎಸ್‍ಗೆ ವಾಪಸ್ ಬರುತ್ತಾರೆ ಎಂಬುದರಲ್ಲಿ ಸತ್ಯಾಂಶವಿಲ್ಲ.