ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಪರ ಕೆಲಸ ಮಾಡಿ-ಕಾಂಗ್ರೇಸ್ ಮುಖಂಡರಿಗೆ ಸೂಚನೆ ನೀಡಿದ ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು, ಮಾ.20-ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನ ಲೋಕಸಭಾ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಕಾಂಗ್ರೆಸ್ ಮುಖಂಡರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ಹಾಸನ ಜಿಲ್ಲೆಯಲ್ಲಿ ಅನುಮಾನಗಳು ಆರಂಭಗೊಂಡಿವೆ. ಅದನ್ನು ಬಗೆಹರಿಸಿ ಮೈತ್ರಿಯಲ್ಲಿನ ಪ್ರಾಮಾಣಿಕತೆ ಕಾಪಾಡಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಹರಸಾಹಸ ನಡೆಸುತ್ತಿದ್ದು, ಇಂದು ತಮ್ಮ ಮನೆಗೆ ಬಂದ ಹಾಸನ ಜಿಲ್ಲೆಯ ನೂರಾರು ಕಾರ್ಯಕರ್ತರು, ಮುಖಂಡರ ಸಿದ್ದರಾಮಯ್ಯ ಮಹತ್ವದ ಮಾತುಕತೆ ನಡೆಸಿದ್ದಾರೆ.

ಮಾಜಿ ಸಚಿವ ಗಂಡಸಿ ಶಿವರಾಂ, ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಆಗಮಿಸಿದ್ದ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಯಾವುದೇ ಕಾರಣಕ್ಕೂ ಮೈತ್ರಿ ಧರ್ಮಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.

ಹಾಸನದಲ್ಲಿ ದೇವೇಗೌಡರ ಬದಲಾಗಿ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಿರುವುದಕ್ಕೆ ಈ ಸಂದರ್ಭದಲ್ಲಿ ಕೆಲ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಂಜು ಅವರು ಬಿಜೆಪಿ ಸೇರಿದ ವಿರುದ್ಧವೂ ಆಕ್ರೋಶಗಳು ಕೇಳಿ ಬಂದಿವೆ.

ಆದರೆ ಪಕ್ಷಾಂತರಕ್ಕೆ ಹೆಚ್ಚಿನ ಒತ್ತು ನೀಡದೆ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬೇಕು. ಮಂಜು ಕಾಂಗ್ರೆಸ್‍ನಿಂದಲೇ ಬಿಜೆಪಿ ಸೇರಿ ಅಭ್ಯರ್ಥಿಯಾಗುತ್ತಿದ್ದಾರೆ. ಹಳೆಯ ಸ್ನೇಹವನ್ನು ಮುಂದಿಟ್ಟುಕೊಂಡು ಬಿಜೆಪಿ ಪರವಾಗಿ ಪ್ರಚಾರ ಮಾಡಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಮೊದಲ ಗುರಿ. ಹೀಗಾಗಿ ಜೆಡಿಎಸ್-ಕಾಂಗ್ರೆಸ್‍ನಿಂದ ಯಾರೇ ಅಭ್ಯರ್ಥಿಯಾಗಿದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದೆ, ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕೆಲಸ ಮಾಡಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ