ಮಂಡ್ಯ, ಮಾ.20- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಗರದಲ್ಲಿ ಬೀಡು ಬಿಟ್ಟಿದ್ದು, ಚುನಾವಣಾ ಕಾರ್ಯತಂತ್ರ ರೂಪಿಸುತ್ತಿದ್ದಾರೆ.ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ನಗರದಲ್ಲೇ ಇದ್ದು ಜೆಡಿಎಸ್ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಚುನಾವಣೆಯಲ್ಲಿ ಗೆಲುವಿಗೆ ರೂಪುರೇಷೆಗಳನ್ನು ಸಿದ್ಧಪಡಿಸತೊಡಗಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ರಾಜಕೀಯವಾಗಿ ಇಡೀ ರಾಜ್ಯದಲ್ಲೇ ಭಾರೀ ಕುತೂಹಲ ಕೆರಳಿಸಿದೆ. ಹೆಚ್ಚಿನ ಪ್ರಚಾರವೂ ಈ ಕ್ಷೇತ್ರದ ಚುನಾವಣೆ ಬಗ್ಗೆ ನಡೆಯುತ್ತಿದೆ.
ಕೇಂದ್ರದ ಮಾಜಿ ಸಚಿವ ಅಂಬರೀಶ್ ಅವರ ಪತ್ನಿ, ನಟಿ ಸುಮಲತಾ ಅವರ ಸ್ಪರ್ಧೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಾರಾರಂಗು ಕಂಡುಬಂದಿದೆ. ದಿನದಿಂದ ದಿನಕ್ಕೆ ಚುನಾವಣೆಯ ಕಾವು ರಂಗೇರುತ್ತಿದೆ.
ಚಲನಚಿತ್ರ ರಂಗದ ನಟ-ನಟಿಯರು ಸುಮಲತಾ ಅವರ ಬೆಂಬಲಕ್ಕೆ ನಿಂತಿರುವುದರಿಂದ ಮಂಡ್ಯದಲ್ಲಿ ಪರ-ವಿರೋಧದ ಚರ್ಚೆಗಳು ತಾರಕಕ್ಕೇರಿವೆ. ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಕುಮಾರಸ್ವಾಮಿ ತಮ್ಮ ಪುತ್ರನ ಗೆಲುವಿಗೆ ಜಿಲ್ಲೆಯ ರಾಜಕೀಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಅಗತ್ಯವಿರುವ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.