ಹಾಸನ, ಮಾ.19- ಬಿಜೆಪಿ ಪಕ್ಷ ಸೇರಿದ ಎ.ಮಂಜು ಉಂಡುಹೋದ ಕೊಂಡುಹೋದ ವ್ಯಕ್ತಿಯಾಗಿದ್ದು, ಪಕ್ಷಕ್ಕೆ ವಿಶ್ವಾಸದ್ರೋಹವೆಸಗಿದ್ದಾರೆ ಎಂದು ಕಾಂಗ್ರೆಸ್ನ ಮಾಜಿ ಸಚಿವ ಬಿ.ಶಿವರಾಂ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ.ಮಂಜು ಕಾಂಗ್ರೆಸ್ ಪಕ್ಷದಲ್ಲಿ ಹಲವು ದಶಕಗಳಿಂದ ಶಾಸಕರಾಗಿ, ಸಚಿವರಾಗಿ ಅಧಿಕಾರ ಅನುಭವಿಸಿ ಇಂದು ಪಕ್ಷದ ಸಿದ್ಧಾಂತ ಮರೆತು ಬಿಜೆಪಿ ಸೇರಿದ್ದಾರೆ. ಇದು ಉತ್ತಮ ರಾಜಕೀಯ ಬೆಳವಣಿಗೆಯಲ್ಲ ಎಂದು ದೂರಿದರು.
ಹಾಸನದಲ್ಲಿ ಹಲವು ಬಾರಿ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಗುರುಗಳು. ಅವರ ಆಣತಿಯಂತೆ ನಡೆಯುವೆ. ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳಿದ್ದ ಮಂಜು ಅವರು ಇಂದು ಗುರುವಿಗೇ ತಿರುಮಂತ್ರ ಹಾಕಿದ್ದಾರೆ. ದೇವೇಗೌಡರ ನೆಪವೊಡ್ಡಿ ಬಿಜೆಪಿ ಸೇರಿರುವ ಮಂಜು ಕುಟುಂಬ ರಾಜಕಾರಣ ಎಂದು ಹೇಳುವುದು ಸರಿಯಲ್ಲ. ಅವರ ಪುತ್ರನೂ ಜಿಪಂ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯೂತ್ ಪ್ರೆಸಿಡೆಂಟ್ ಆಗಿದ್ದಾರೆ. ಹೀಗಿರುವಾಗ ಗೌಡರ ಕುಟುಂಬ ರಾಜಕಾರಣ ಟೀಕಿಸುವುದು ಸರಿಯಲ್ಲ ಎಂದರು.
ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದು, ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಜೆಡಿಎಸ್ ಬೆಂಬಲಿಸಿ ಮೈತ್ರಿ ಧರ್ಮ ಪಾಲಿಸುವುದಾಗಿ ಹೇಳಿದ ಶಿವರಾಂ, ನಾಳೆ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ಇದ್ದು ಅಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹಾಗೂ ಜಿಲ್ಲೆಯಲ್ಲೂ ಕಾಂಗ್ರೆಸ್ ಕಾರ್ಯಕರ್ತರ ಸಭೆ ಸೇರಿ ತೀರ್ಮಾನ ಮಾಡಲಾಗುವುದು ಎಂದರು.