ಬೆಂಗಳೂರು, ಮಾ.18- ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ರೆಬಲ್ಸ್ಟಾರ್ ದಿ.ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಘೋಷಣೆ ಮಾಡಿದ್ದಾರೆ.
ಈ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ಸ್ಪರ್ಧೆಯಿಂದ ರಾಷ್ಟ್ರದ ಗಮನ ಸೆಳೆಯುವುದು ಖಚಿತವಾಗಿದೆ.
ಇದೇ 20ರಂದು ಬೆಳಗ್ಗೆ 10 ಗಂಟೆಗೆ ಮಂಡ್ಯದಲ್ಲಿ ಅಂಬರೀಶ್ ಅವರ ಅಭಿಮಾನಿಗಳು, ನನ್ನ ಹಿತೈಷಿಗಳ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ನನಗೆ ಸೋಲು-ಗೆಲುವು ಮುಖ್ಯವಲ್ಲ. ಮಂಡ್ಯ ಜನತೆಯ ಋಣ ತೀರುಸುವುದಕ್ಕಾಗಿ ನನ್ನ ಸ್ಪರ್ಧೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ನನಗೆ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ವಿಧಾನಪರಿಷತ್ಗೆ ಆಯ್ಕೆ ಮಾಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಆದರೆ, ನಾನು ಯಾವುದಕ್ಕೂ ಬೆಲೆ ಕೊಡದೆ ಅಂಬರೀಶ್ ಅವರ ಮೇಲೆ ಮಂಡ್ಯದ ಜನತೆ ಇಟ್ಟ ಪ್ರೀತಿ, ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಲು ಸ್ಪರ್ಧೆ ಮಾಡುತ್ತಿದ್ದೇನೆ. ವೈಯಕ್ತಿಕವಾಗಿ ನನಗೆ ಯಾರ ಮೇಲೂ ದ್ವೇಷವಿಲ್ಲ ಎಂದು ಹೇಳಿದರು.
ನನಗೆ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ದೊಡ್ಡ ದೊಡ್ಡ ಹಣದ ಆಮಿಷಗಳನ್ನು ನೀಡಲಾಗಿತ್ತು. ಬೇರೆ ಬೇರೆ ರಾಜಕೀಯ ಸ್ಥಾನಮಾನ ಕೊಡುವುದಾಗಿಯೂ ಆಶ್ವಾಸನೆ ಬಂದಿತ್ತು. ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಅಂಬರೀಶ್ ಅವರ ಕನಸುಗಳನ್ನು ನನಸು ಮಾಡಬೇಕೆಂಬ ಒಂದೇ ಕಾರಣಕ್ಕಾಗಿ ಸ್ಪರ್ಧಿಸುತ್ತಿದ್ದೇನೆ. ನನ್ನ ಮುಂದೆ ಎಂಥಹ ಸವಾಲುಗಳು ಇವೆ ಎಂಬುದು ಗೊತ್ತು ಎಂದರು.
ನಾನು ಮೂಲತಃ ರಾಜಕಾರಣಿ ಅಲ್ಲ. ರಾಜಕೀಯಕ್ಕೆ ಬರಬೇಕೆಂಬ ಇಚ್ಛೆಯೂ ಇರಲಿಲ್ಲ. ಅಂಬರೀಶ್ ಅವರು ಸಂಸದರಾಗಿ, ಸಚಿವರಾಗಿ, ಶಾಸಕರಾಗಿದ್ದ ವೇಳೆ ನಾವು ಯಾರೂ ಸಹ ರಾಜಕಾರಣದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಅನಿವಾರ್ಯ ಕಾರಣಗಳಿಂದ ಇಂದು ಬರಬೇಕಾಯಿತು. ಆದರೂ ಜನತೆ ನನ್ನನ್ನು ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ನನ್ನ ಬಳಿ ಅಧಿಕಾರ, ಹಣ ಎರಡೂ ಇಲ್ಲ. ಅಂಬರೀಶ್ ಅವರು ಪ್ರಾರಂಭದಿಂದ ಜೀವನದ ಕೊನೆಯವರೆಗೂ ಜನರಿಂದ ಗಳಿಸಿರುವ ಪ್ರೀತಿ, ವಿಶ್ವಾಸವೇ ನನಗೆ ಆಸ್ತಿ. ಮಂಡ್ಯದ ಜನತೆ ಸ್ವಾಭಿಮಾನಿಗಳು. ಹಣಕ್ಕಾಗಿ ಮತ ಮಾರಿಕೊಳ್ಳುವುದಿಲ್ಲ ಎಂಬುದು ನನಗೆ ಗೊತ್ತು ಎಂದು ತಿಳಿಸಿದರು.
ರಾಜೀನಾಮೆ ಯಾರು ಕೊಟ್ಟಿದ್ದಾರೆ:
ಮಂಡ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಸುಮಲತಾ ಎಲ್ಲಿದ್ದರು ಎಂದು ಕೆಲವರು ಕೇಳುತ್ತಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಬಂದಾಗ ಅಂಬರೀಶ್ ಕೇಂದ್ರ ಸಚಿವರಾಗಿದ್ದರು. ಅಂದು ಮಂಡ್ಯದ ಜನತೆಯ ಒಂದೇ ಒಂದು ಪ್ರೀತಿಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದರು.
ರಾಜ್ಯದ ಇತಿಹಾಸದಲ್ಲಿ ರೈತರ ಸಂಕಷ್ಟಕ್ಕಾಗಿ ಸಚಿವ ಸ್ಥಾನ ತ್ಯಾಗ ಮಾಡಿದವರ ಒಂದು ಹೆಸರು ಹೇಳಿ ಎಂದು ಪರೋಕ್ಷವಾಗಿ ಜೆಡಿಎಸ್ಗೆ ಸವಾಲು ಹಾಕಿದರು.
ನಮ್ಮ ಕುಟುಂಬ ಯಾವಾಗಲೂ ರೈತರಿಗೆ ಸ್ಪಂದಿಸಿದೆ. ಕಷ್ಟ ಎಂದು ಕೇಳಿ ಬಂದವರಿಗೆ ಅಂಬರೀಶ್ ಎಂದಿಗೂ ಬರಿಗೈಯಲ್ಲಿ ಕಳುಹಿಸಿಲ್ಲ. ನಮ್ಮ ಕೈಲಾದಷ್ಟು ಸೇವೆ, ಸಹಕಾರ ಮಾಡಿದ್ದೇವೆ. ಆದರೆ, ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬುದು ಅಂಬರೀಶ್ ಅವರ ನಿಲುವಾಗಿತ್ತು ಎಂದರು.
ಅಂಬರೀಶ್ ಅವರು ರಾಜಕಾರಣದಲ್ಲಿ ಬೇರೆಯವರು ಬೆಳೆಯಬೇಕೆಂಬ ಇಚ್ಚೆಹೊಂದಿದ್ದರು. ನಾನು ಇರುವವರೆಗೂ ನಮ್ಮ ಕುಟುಂಬದವರು ರಾಜಕಾರಣಕ್ಕೆ ಬರಬಾರದು ಎಂಬ ಅವರ ಅಭಿಲಾಷೆಯಾಗಿತ್ತು. ಅದೇ ರೀತಿ ನಾವು ನಡೆದುಕೊಂಡೆವು. ಬೇರೆಯವರಿಗೆ ಸಾಮಥ್ರ್ಯ ಇದ್ದರೆ ಬೆಳೆಯಲಿ ಎಂಬ ಇಚ್ಚೆ ಹೊಂದಿದ್ದರು.
ನಾವು ಯಾವೊತ್ತೂ ಕುಟುಂಬ ರಾಜಕಾರಣವನ್ನು ಮಾಡಲಿಲ್ಲ ಎಂದು ಮತ್ತೊಮ್ಮೆ ಜೆಡಿಎಸ್ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ದೇವರ ಇಚ್ಚೆ, ಜನರ ಆಶೀರ್ವಾದ, ಅಂಬಿ ಅವರ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೇನೆ. ಈಗಾಗಲೇ ಮಂಡ್ಯದಲ್ಲಿ ಅನೇಕ ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಅಭಿಪ್ರಾಯವನ್ನು ಸಂಗ್ರಹಿಸಿದ್ದೇನೆ. ಎಲ್ಲೆಲ್ಲೂ ಜನರು ಹೇಳುತ್ತಿರುವುದು ಒಂದೇ ಮಾತು ನೀವು ಚುನಾವಣೆಗೆ ನಿಂತು ಅಂಬರೀಶ್ ಅವರ ಕನಸುಗಳನ್ನು ನನಸು ಮಾಡಬೇಕು. ಎಲ್ಲಾ ರೀತಿಯ ಸಹಕಾರ ನೀಡಿ ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇಂತಹ ಪ್ರೀತಿ, ವಿಶ್ವಾಸ ಎಲ್ಲಿ ಸಿಗುತ್ತದೆ ಎಂದು ಸುಮಲತಾ ಪ್ರಶ್ನಿಸಿದರು.
ನಾನು ಸಂಕಷ್ಟದಲ್ಲಿದ್ದಾಗ ನನಗೆ ಚಿತ್ರರಂಗದವರು ಎಲ್ಲಾ ರೀತಿಯ ಬೆಂಬಲ ನೀಡಿದ್ದಾರೆ. ಅದರಲ್ಲೂ ನನ್ನ ಸಹೋದರನಂತಿರುವ ರಾಕ್ಲೈನ್ ವೆಂಕಟೇಶ್, ದೊಡ್ಡ ಮಗನಂತಿರುವ ದರ್ಶನ, ಚಿಕ್ಕ ಮಗನಂತಿರುವ ಯಶ್ ಸಂಪೂರ್ಣ ಸಹಕಾರ ನೀಡುವುದಾಗಿ ಸ್ವಯಂ ಪ್ರೇರಿತರಾಗಿ ಬಂದಿದ್ದಾರೆ. ಎಲ್ಲಾ ಚಿತ್ರರಂಗದವರ ಬೆಂಬಲ ನನಗೆ ಇದೆ ಎಂದರು.
ವೈಯಕ್ತಿಕ ಟೀಕೆ ಬೇಡ:
ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪ ಮಾಡುವುದು ಸರ್ವೆ ಸಾಮಾನ್ಯ. ಆದರೆ, ಈ ಚುನಾವಣೆಯಲ್ಲಿ ವೈಯಕ್ತಿಕ ಆರೋಪ-ಪ್ರತ್ಯಾರೋಪ ಮಾಡುವುದು ನನಗೆ ಇಷ್ಟವಿಲ್ಲ. ನಮ್ಮ ಎದುರಾಳಿಗಳನ್ನೂ ಕೂಡ ಗೌರವಯುತವಾಗಿ ನಡೆಸಿಕೊಳ್ಳಬೇಕು. ಯುವಕರಿಗೆ ನಾವು ಮಾದರಿಯಾಗಬೇಕಾದ ಅಗತ್ಯವಿದೆ. ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ಟೀಕೆ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದವರ ಬೆಂಬಲ ಕೇಳಿದ್ದೇನೆ. ಹಿರಿಯರಾದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯನವರ ಸಹಕಾರವನ್ನೂ ಕೋರಿದ್ದೇನೆ.
ಮಂಡ್ಯದಲ್ಲಿ ಕಾಂಗ್ರೆಸ್ಗೆ ಒಂದು ಗಟ್ಟಿಯಾದ ಧ್ವನಿ ಬೇಕು. ಅಲ್ಲಿ ಸಾವಿರಾರು ಕಾರ್ಯಕರ್ತರು ಒಂದಿಲ್ಲೊಂದು ರೀತಿಯ ಕಷ್ಟ ಎದುರಿಸುತ್ತಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಇದಕ್ಕಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದರು.
ನನ್ನ ವಿರುದ್ಧ ಯಾರು ಕಣಕ್ಕಿಳಿದಿದ್ದಾರೆ ಎಂಬುದು ಗೊತ್ತು. ಮುಖ್ಯಮಂತ್ರಿ ಅವರ ಪುತ್ರರೇ ಸ್ಪರ್ಧಿಸುತ್ತಿದ್ದು, 8 ಮಂದಿ ಶಾಸಕರು, ಮೂವರು ಸಚಿವರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಎಲ್ಲರನ್ನೂ ಎದುರಿಸುವುದು ಸುಲಭದ ಮಾತಲ್ಲ. ಆದರೆ, ಮಂಡ್ಯದ ಜನತೆಯ ಸಂಪೂರ್ಣ ಬೆಂಬಲ ಸಿಗಲಿದೆ ಎಂಬ ವಿಶ್ವಾಸ ನನಗಿದೆ. ಅಂಬರೀಶ್ ಬದುಕಿರುವವರೆಗೂ ಯಾರೊಬ್ಬರಿಗೂ ತೊಂದರೆ ಕೊಟ್ಟಿಲ್ಲ. ಅದೆ ಪ್ರೀತಿ, ಗೌರವ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
ಯಾವುದೇ ಒತ್ತಡ ಬಂದರೂ ನಾನು ಸ್ಪರ್ಧಾಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮಂಡ್ಯದ ಜನತೆಗಾಗಿ ತೆಗೆದುಕೊಂಡಿರುವ ದೃಢ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಏನೇ ಆಗಲಿ ತೆಗೆದುಕೊಂಡಿರುವ ತೀರ್ಮಾನದಿಂದ ಹಿಂದಿರುಗಿ ನೋಡುವ ಪ್ರಶ್ನೆ ಉದ್ಬವಿಸುವುದಿಲ್ಲ ಎಂದು ಸುಮಲತಾ ಪುನರುಚ್ಚರಿಸಿದರು.
ಸುಮಲತಾ ಅವರಿಗೆ ಬೆಂಬಲ:
ಚಿತ್ರನಟ ದರ್ಶನ್ ಮಾತನಾಡಿ, ನಾವು ಅಂಬರೀಶ್ ಅವರ ಮನೆ ಮಕ್ಕಳು. ಅಮ್ಮ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಬೆಂಬಲ ಸೂಚಿಸುವುದಷ್ಟೇ ನನ್ನ ಕರ್ತವ್ಯ. ನನಗೆ ಈ ಚುನಾವಣೆ ಹೊಸದೇನಲ್ಲ. ಒಂದು ಲೋಕಸಭೆ, ಮೂರು ವಿಧಾನಸಭೆ ಚುನಾವಣೆಯನ್ನು ನಡೆಸಿಕೊಟ್ಟಿದ್ದೇನೆ. ಒಬ್ಬ ಚಿತ್ರರಂಗದ ನಟನಾಗಿ ಎನ್ನುವುದಕ್ಕಿಂತ ಅಪ್ಪಾಜಿ ಮಗನಾಗಿ ಮತ ಕೇಳುತ್ತೇನೆ. ಸುಮಲತಾ ಅವರೂ ನನ್ನನ್ನು ಮಗನಂತೆ ನೋಡುತ್ತಿದ್ದಾರೆ. ಎದುರಾಳಿ ಯಾರೆ ಆಗಿರಲಿ ಅಂಬರೀಶಣ್ಣನ ಪ್ರೀತಿ, ವಿಶ್ವಾಸಕ್ಕೆ ತಲೆ ಬಾಗಿ ಮಂಡ್ಯದ ಜನತೆ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ . ನೀವು ಕೇವಲ ಒಂದೆರೆಡು ದಿನ ಮಾತ್ರ ಪ್ರಚಾರ ಮಾಡುತ್ತೀರೋ ? ಇಲ್ಲವೆ ಪೂರ್ಣ ಪ್ರಮಾಣದಲ್ಲಿ ಪ್ರಚಾರ ಮಾಡುತ್ತೀರೋ ಎಂಬ ಸುದ್ದಿಗಾರರ ಪ್ರಶ್ನೆಗೆ, ನಾನು ಈ ಬಾರಿ ಪೂರ್ಣ ಪ್ರಮಾಣದ ಚಿತ್ರ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನೀವೇ ಕಾದು ನೋಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಅಂಬಿ ಅವರ ಸಾವಿನ ಅನುಕಂಪವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಮಂಡ್ಯ ಜನತೆ ಅಂಬರೀಶ್ ಅವರ ಮೇಲೆ ಇಟಿದ್ದ ಪ್ರೀತಿ ಚುನಾವಣೆಯಲ್ಲಿ ಕೈ ಹಿಡಿಯಲಿದೆ. ನಿಖಿಲ್ ಕುಮಾರಸ್ವಾಮಿ ಮೊದಲೇ ಕರೆದಿದ್ದರೆ ನಾನು ಪ್ರಚಾರಕ್ಕೆ ಹೋಗುತ್ತಿದ್ದೆ. ಚಿತ್ರರಂಗದಲ್ಲಿ ನನಗೆ ಎಲ್ಲರೂ ಸ್ನೇಹಿತರೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಕರೆದರೂ ಪ್ರಚಾರಕ್ಕೆ ಹೋಗುತ್ತೇನೆ ಎಂದರು.
ನಟ ಯಶ್ ಮಾತನಾಡಿ, ಈಗಾಗಲೇ ನಾವು ರಣರಂಗಕ್ಕೆ ನುಗ್ಗಿದ್ದೇವೆ. ಒಳ್ಳೆಯದಾಗುತ್ತೋ, ಕೆಟ್ಟದ್ದಾಗುತ್ತೋ, ಮುಂದೇನಾಗುತ್ತೋ ಎಂಬ ಬಗ್ಗೆ ಕುರಿತು ಯೋಚಿಸುವ ಸಮಯವಲ್ಲ. ಅಮ್ಮ ತೆಗೆದುಕೊಂಡ ನಿರ್ಧಾರವನ್ನು ಮಕ್ಕಳಾಗಿ ಬೆಂಬಲಿಸುವುದಷ್ಟೇ ನಮ್ಮ ಕರ್ತವ್ಯ ಎಂದರು.
ಜನರ ಪ್ರೀತಿ, ವಿಶ್ವಾಸಕ್ಕೆ ತಲೆ ಬಾಗಿ ಅಮ್ಮ ಚುನಾವಣೆಗೆ ನಿಂತಿದ್ದಾರೆ. ಮಂಡ್ಯ ಜನ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲರು. ಅಂಬರೀಶಣ್ಣನವರ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ಗೌರವದ ಮುಂದೆ ಹಣ, ಅಧಿಕಾರ ಏನೂ ನಡೆಯುವುದಿಲ್ಲ. ಸುಮಕ್ಕ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಇಟ್ಟುಕೊಂಡಿದ್ದಾರೆ. ಮಂಡ್ಯ ಜನತೆ ಈ ಬಾರಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ನಾವು ಮಕ್ಕಳಾಗಿ ಪೂರ್ಣ ಪ್ರಮಾಣದಲ್ಲಿ ಪ್ರಚಾರ ಮಾಡುತ್ತೇವೆ. ಸಿನಿಮಾ ನಟರು ಎನ್ನುವುದಕ್ಕಿಂತ ಅಂಬರೀಶಣ್ಣನ ಹೆಸರು ಹೇಳಿಕೊಂಡು ಹೋಗುತ್ತೇವೆ. ಜನರು ನಮ್ಮ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾತನಾಡಿ, ನನಗೂ ಮತ್ತು ರಾಜಕೀಯಕ್ಕೂ ಬಹಳ ದೂರ. ಅನೇಕ ಚುನಾವಣೆಗಳನ್ನು ನೋಡಿದ್ದರೂ ರಾಜಕೀಯದ ಜ್ಞಾನ ಇಲ್ಲ. ಆದರೆ, ಅಂಬರೀಶ್ ನನಗೆ ಎಲ್ಲವನ್ನೂ ಕೊಟ್ಟಿದ್ದಾರೆ. ಅವರ ಕುಟುಂಬದ ಸದಸ್ಯನಾಗಿ ಸುಮಲತಾ ಅವರಿಗೆ ಬೆಂಬಲ ನೀಡುವುದು ನನ್ನ ಕರ್ತವ್ಯ.
ಅಂಬರೀಶ್ ಇಂದು ನಮ್ಮ ಜತೆ ಇಲ್ಲದಿರಬಹುದು. ಆದರೆ, ಅವರು ತೋರಿಸಿಕೊಟ್ಟ ಪ್ರೀತಿ, ಸ್ನೇಹ, ವಿಶ್ವಾಸ ಎಂದೆಂದಿಗೂ ನಮ್ಮ ಹೃದಯದಲ್ಲಿರುತ್ತದೆ.
ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಅವರಿಗೆ ಮಂಡ್ಯ ಜನತೆ ಬೆಂಬಲಿಸಲಿದ್ದಾರೆ ಎಂಬ ಅಚಲ ವಿಶ್ವಾಸವಿದೆ. ಕಾವೇರಿ ನದಿ ನೀರು ಸಮಸ್ಯೆ ಬಂದಾಗ ಸಚಿವ ಸ್ಥಾನ ಲೆಕ್ಕಿಸದೆ ರಾಜೀನಾಮೆ ಕೊಟ್ಟ ನಿಜವಾದ ಮಂಡ್ಯದ ಗಂಡು ಅಂಬರೀಶ್. ನಾವು ಯಾರ ಬಗ್ಗೆಯೂ ವೈಯಕ್ತಿಕವಾಗಿ ಟೀಕೆ ಮಾಡದೆ ಅಂಬರೀಶ್ ತೋರಿಸಿಕೊಟ್ಟ ಮಾರ್ಗದಲ್ಲೇ ಪ್ರಚಾರ ಮಾಡುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟ ದೊಡ್ಡಣ, ಅಂಬರೀಶ್ ಪುತ್ರ ಅಭಿಷೇಕ ಮತ್ತಿತ್ತರು ಉಪಸ್ಥಿತರಿದ್ದರು.