ಸಚಿವ ಸಾ.ರಾ.ಮಹೇಶ್ ಹೇಳಿಕೆ-ಮೈಸೂರು-ಮಂಡ್ಯ ಕಾಂಗ್ರೇಸಿಗರ ಅಸಮಾಧಾನ

ಮೈಸೂರು, ಮಾ.18- ಜೆಡಿಎಸ್‍ನ ಪ್ರವಾಸೋದ್ಯಮ ಖಾತೆ ಸಚಿವ ಸಾ.ರಾ.ಮಹೇಶ್ ಅವರು ನೀಡಿರುವ ಹೇಳಿಕೆ ಮೈಸೂರು-ಮಂಡ್ಯ ಕಾಂಗ್ರೆಸಿಗರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ.

ಸಾ.ರಾ.ಮಹೇಶ್ ಅವರ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ವಿರೋಧಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವಂತಹ ಸಂದರ್ಭದಲ್ಲಿ ಅದರಲ್ಲೂ ಚುನಾವಣೆಗೆ ಕೆಲವು ದಿನಗಳು ಮಾತರ ಬಾಕಿ ಇರುವಾಗಲೇ ಈ ರೀತಿಯ ಹೇಳಿಕೆಯನ್ನು ನೀಡಬಾರದಿತ್ತು ಎಂದಿದ್ದಾರೆ.

ನಾನಾಗಲೀ, ನಮ್ಮ ಕಾಂಗ್ರೆಸ್‍ನ ಯಾವೊಬ್ಬ ಮುಖಂಡರು, ನಾಯಕರು, ಕಾರ್ಯಕರ್ತರೂ ಸಹ ಜೆಡಿಎಸ್ ಅಭ್ಯರ್ಥಿ ವಿರುದ್ಧ ಕೆಲಸ ಮಾಡುತ್ತೇವೆಂದು ಯಾರೂ ಹೇಳಲಿಲ್ಲ. ಹಾಗೆಯೇ ಜೆಡಿಎಸ್ ಪರ ಮತಯಾಚನೆ ಮಾಡುವುದಿಲ್ಲ ಎಂದೂ ಸಹ ಹೇಳಲಿಲ್ಲ. ಹೀಗಿರುವಾಗ ಸಾ.ರಾ.ಮಹೇಶ್ ಅವರು ಯಾವ ಆಧಾರದ ಮೇಲೆ ಇಂತಹ ಹೇಳಿಕೆ ನೀಡಿದ್ದಾರೆಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಹೇಳಿಕೆಯಿಂದ ಕಾಂಗ್ರೆಸ್‍ನ ಕಾರ್ಯಕರ್ತರಲ್ಲಿ ತೀವ್ರ ಗೊಂದಲವನ್ನುಂಟು ಮಾಡಿದೆ. ನಾವುಗಳ್ಯಾರೂ ಜೆಡಿಎಸ್ ವಿರುದ್ಧ ಮಾತನಾಡಿಯೇ ಇಲ್ಲ. ಹೀಗಿರುವಾಗ ರಾಜ್ಯದ ಸಮ್ಮಿಶ್ರ ಸರ್ಕಾರದ ಪ್ರಭಾವಿ ರಾಜಕಾರಣಿಯಾಗಿರುವ ಸಾ.ರಾ.ಮಹೇಶ್ ಅವರು ಏಕೆ ಹೀಗೆ ಹೇಳಿಕೆ ಕೊಟ್ಟದ್ದಾರೆಂದು ಕಾಂಗ್ರೆಸ್‍ನವರು ಹೇಳುತ್ತಿದ್ದಾರೆ.

ಸಚಿವರ ಮಾತನ್ನು ಕೇಳಿದರೆ ನಾವು ಮುಂದಿನ ದಿನಗಳಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತಯಾಚಿಸಬೇಕೋ, ಬೇಡವೋ ಎಂಬ ಗೊಂದಲ ಉಂಟಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಾವು ಈ ಬಗ್ಗೆ ಚಿಂತನೆ ನಡೆಸಬೇಕಾದಂತಹ ಪರಿಸ್ಥಿತಿ ಉಂಟಾಗಿದೆ ಎಂದು ಮೈಸೂರು-ಮಂಡ್ಯ ಕಾಂಗ್ರೆಸಿಗರು ಹೇಳುತ್ತಿದ್ದಾರೆ.

ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತಹ ಪರಿಸ್ಥಿತಿ ಇದೀಗ ಉಂಟಾಗಿದೆ. ಜೆಡಿಎಸ್ ನಾಯಕರು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ