ಬೆಂಗಳೂರು: ದಿಢೀರ್ ದಿಲ್ಲಿಗೆ ತೆರಳಿರುವ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಲಿದ್ದಾರಾ ಅನ್ನುವ ಅನುಮಾನ ಇನ್ನಷ್ಟು ಬಲಗೊಂಡಿದೆ.
ನಿನ್ನೆ ಬೆಂಗಳೂರಿನ ತಮ್ಮ ನಿವಾಸದಿಂದ ಹೊರಟು ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ದಿಲ್ಲಿಯಲ್ಲಿ ಇವರು ಇಂದು ಬಿಜೆಪಿ ನಾಯಕರನ್ನು ಭೇಟಿ ಮಾಡಿ ಅಂತಿಮ ಹಂತದ ಮಾತುಕತೆ ನಡೆಸಲಿದ್ದಾರೆ. ಸಾಧ್ಯವಾದರೆ ಶೀಘ್ರವೇ ಬಿಜೆಪಿ ಸೇರಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಂಡಿರುವ ಅವರು ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಇಲ್ಲಿ ಅಥವಾ ರಾಜ್ಯದ ಯಾವುದೇ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಮಾನಸಿಕವಾಗಿ ಪಕ್ಷ ಬಿಟ್ಟಿರುವ ಅವರು ಬಿಜೆಪಿ ಸೇರುತ್ತಾರೆ ಎನ್ನುವ ಬಲವಾದ ಮಾತು ಕೇಳಿಬರುತ್ತಿದೆ. ಅದಾಗಲೇ ಅವರು ಒಂದೆರಡು ಸುತ್ತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಅದಾಗಲೇ ಕಾಂಗ್ರೆಸ್ ನಾಯಕರ ವಿರುದ್ಧವೇ ಬೇಸರಗೊಂಡಿರುವ ರಮೇಶ್ ಜಾರಕಿಹೊಳಿ ಎಲ್ಲರ ವಿರುದ್ಧ ಮುನಿಸಿಕೊಂಡಿದ್ದು, ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚೆಯಲ್ಲೂ ಅವರು ಭಾಗಿಯಾಗಿರಲಿಲ್ಲ. ಇದೀಗ ದಿಢೀರ್ ದಿಲ್ಲಿಗೆ ತೆರಳಿದ್ದು ಕುತೂಹಲ ಕೆರಳಿಸಿದೆ.
ದಿಲ್ಲಿಯಲ್ಲಿ ಕಾಂಗ್ರೆಸ್ನ ಮತ್ತೊಬ್ಬ ಶಾಸಕ ಬಿ. ನಾಗೇಂದ್ರ ಕೂಡ ಇದ್ದಾರೆ ಎನ್ನಲಾಗುತ್ತಿದ್ದು, ಅವರು ಕೂಡ ತಮ್ಮ ಸಹೋದರ ವೆಂಕಟೇಶ್ ಪ್ರಸಾದ್ರನ್ನು ಬಿಜೆಪಿಗೆ ಸೇರಿಸಿ, ಬಳ್ಳಾರಿಯಿಂದ ಅವರನ್ನೇ ಕಣಕ್ಕಿಳಿಸುವ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯ ಪ್ರಮುಖ ಬಿಜೆಪಿ ನಾಯಕ ಶ್ರೀರಾಮುಲು ಕೂಡ ತಮ್ಮ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ವೆಂಕಟೇಶ್ ಪ್ರಸಾದ್ ಕೂಡ ಒಂದೆರಡು ದಿನದಲ್ಲಿ ಬಿಜೆಪಿ ಸೇರಿ, ಬಳ್ಳಾರಿ ಅಭ್ಯರ್ಥಿ ಆಗಲಿದ್ದಾರೆ. ಚುನಾವಣೆಗೆ ಮುನ್ನವೇ ನಾಗೇಂದ್ರ ಕೂಡ ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.