ಪಣಜಿ: ಮನೋಹರ್ ಪರಿಕ್ಕರ್ ಇನ್ನೂ ಹಾಸಿಗೆಯಲ್ಲಿ ವಿಷಮ ಸ್ಥಿತಿಯಲ್ಲಿರುವಾಗಲೇ ಗೋವಾದಲ್ಲಿ ಪವರ್ ರೇಸ್ ಶುರುವಾಗಿತ್ತು. ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜಾ ನಿಧನದ ನಂತರ ಬಿಜೆಪಿ ಅಲ್ಪಸಂಖ್ಯಾತವಾಗಿ ಹೋಗಿತ್ತು. ಒಟ್ಟು 40 ಸದಸ್ಯದ ಗೋವಾ ವಿಧಾನಸಭೆಯ ಬಲ ಈಗ 36ಕ್ಕೆ ಇಳಿದಿದೆ. ಇದರಲ್ಲಿ ಬಿಜೆಪಿಯ ಸದಸ್ಯರ ಸಂಖ್ಯೆ 12 ಇದ್ದರೆ ಕಾಂಗ್ರೆಸ್ 14 ಶಾಸಕರನ್ನು ಹೊಂದಿದೆ. ಆದರೆ, ಗೋಮಾಂತಕ್ ಪಕ್ಷದ ಮೂವರು, ಗೋವಾ ಫಾರ್ವರ್ಡ್ ಪಕ್ಷದ ಮೂವರು ಹಾಗೂ ಇತರ ಮೂವರು ಶಾಸಕರ ಬೆಂಬಲ ಸೇರಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಬಲ 21 ಇದೆ.
ಸರಕಾರಕ್ಕೆ ವಿಶ್ವಾಸಮತ ಯಾಚನೆಯ ಪರಿಸ್ಥಿತಿ ಬಂದರೆ ಯಾವುದೇ ಭಯ ಇರುವುದಿಲ್ಲ. 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 16 ಶಾಸಕರನ್ನು ಹೊಂದಿದ್ದರೆ, ಬಿಜೆಪಿ ಬಳಿ 14 ಶಾಸಕರಷ್ಟೇ ಇತ್ತು. ಅಧಿಕಾರ ರಚನೆಗೆ ಮುಂದೆ ಬರಲು ಕಾಂಗ್ರೆಸ್ ಮೀನಮೇಷ ಎಣಿಸುತ್ತಿರುವಂತೆಯೇ ಬಿಜೆಪಿ ಕೂಡಲೇ ಜಾಗೃತಗೊಂಡು ರಾಜ್ಯಪಾಲರಲ್ಲಿ ಮೊದಲು ಪ್ರಸ್ತಾವ ಸಲ್ಲಿಸಿತು. ಎಂಜಿಪಿ, ಜಿಎಫ್ಪಿ ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಸರಕಾರ ರಚಿಸಿತು. ಅತ್ಯಧಿಕ ಶಾಸಕರನ್ನ ಹೊಂದಿದ್ದರೂ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕೂರುವಂಥ ಪರಿಸ್ಥಿತಿ ಬಂತು.
ಕಾಂಗ್ರೆಸ್ನ ಗಾಯದ ಮೇಲೆ ಬರೆ ಎಲೆದಂತೆ ಇಬ್ಬರು ಕೈ ಶಾಸಕರು ರಾಜೀನಾಮೆ ಕೊಟ್ಟಿ ಬಿಜೆಪಿ ಸೇರಿದರು. ಆನಂತರ ಬಿಜೆಪಿಯ ಫ್ರಾನ್ಸಿಸ್ ಡಿಸೋಜಾ ವಿಧಿವಶರಾದರು. ಈಗ ಮನೋಹರ್ ಪರ್ರಿಕರ್ ಇಹಲೋಕ ತ್ಯಜಿಸಿದ್ದಾರೆ. ಬಿಜೆಪಿಯಲ್ಲಿ ಈಗ ಪರಿಕ್ಕರ್ ಅವರಂತಹ ನಾಯಕನ ಕೊರತೆ ಇದ್ದಂತಿದೆ. ಇದನ್ನು ಉಪಯೋಗಿಸಿಕೊಂಡು ಕಾಂಗ್ರೆಸ್ ಪಕ್ಷ ಗೋವಾದಲ್ಲಿ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ.
ಬಿಜೆಪಿ ನೇತೃತ್ವದ ಸರಕಾರಕ್ಕೆ ಬಹುಮತ ಇಲ್ಲ. ಈ ಸರಕಾರವನ್ನು ವಜಾಗೊಳಿಸಿ. ಅತ್ಯಧಿಕ ಶಾಸಕರನ್ನು ಹೊಂದಿರುವ ತನಗೆ ಸರಕಾರ ರಚನೆಯ ಅವಕಾಶ ಕೊಡಿ ಎಂದು ರಾಜ್ಯಪಾಲರಲ್ಲಿ ಕಾಂಗ್ರೆಸ್ ಮನವಿ ಮಾಡಿಕೊಂಡಿದೆ. ಆದರೆ, ತೆರವಾಗಿರುವ ನಾಲ್ಕು ಸ್ಥಾನಗಳಿಗೆ ಮುಂದಿನ ತಿಂಗಳು ಉಪಚುನಾವಣೆ ನಡೆಯುವವರೆಗೂ ಗೋವಾ ವಿಧಾನಸಭೆಯನ್ನು ಅಮಾನತಿನಲ್ಲಿಡುವ ಸಾಧ್ಯತೆ ಇದೆ ಎಂದು ಬಿಜೆಪಿಯ ಮಿತ್ರ ಪಕ್ಷ ಎಂಜಿಪಿ ಹೇಳಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ನಂಬರ್ ಒನ್ ಆದರೂ ಸರಕಾರ ರಚನೆಯ ಭಾಗ್ಯ ಸಿಗುವುದು ಅನುಮಾನವೇ. ಬಿಜೆಪಿಯಿಂದ ಮುಖ್ಯಮಂತ್ರಿ ಆಯ್ಕೆಯಲ್ಲಿ ಎಡವಟ್ಟು ಆಗದಿದ್ದರೆ 2022ರವರೆಗೂ ಗೋವಾದಲ್ಲಿ ಬಿಜೆಪಿ ನೇತೃತ್ವದ ಸರಕಾರವೇ ಮುಂದುವರಿಯು ಸಾಧ್ಯತೆ ದಟ್ಟವಾಗಿದೆ.