
ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಭಾನುವಾರ ಪಣಜಿಯಲ್ಲಿರುವ ಮಗನ ನಿವಾಸದಲ್ಲಿ ವಿಧಿವಶರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ.
ಸಂಜೆ 5 ಗಂಟೆಗೆ ಬೀಚ್ಬಳಿಯ ಮಿರಾಮರ್ನಲ್ಲಿ ಅಂತ್ಯಸಂಸ್ಕಾರ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಲಾ ಅಕಾಡೆಮಿಯಲ್ಲಿ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.
ಇತ್ತ ಪರಿಕ್ಕರ್ ನಿಧನ ಬೆನ್ನಲ್ಲೇ ರಾಜಕೀಯ ಬಿಕ್ಕಟ್ಟು ಸೃಷ್ಟಿ ಆಗಿದ್ದು, ಹೊಸ ಸಿಎಂ ಯಾರಾಗಬೇಕೆಂಬ ಬಗ್ಗೆ ತಡರಾತ್ರಿವರೆಗೂ ನಡೆದ ಸಭೆ ವಿಫಲವಾಗಿದೆ.
ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ 63 ವರ್ಷದ ಮನೋಹರ್ ಪರಿಕ್ಕರ್ ಕಳೆದ ಒಂದು ವರ್ಷದಿಂದ ಪ್ಯಾಂಕ್ರಿಯಾಟಿಕ್ ಕಾಯಿಲೆ (ಮೆದೋಜೀರಕ ಗೃಂಥಿ ಸಮಸ್ಯೆ)ಯಿಂದ ಬಳಲುತ್ತಿದ್ದರು. ಅಲ್ಲದೇ ಕೆಲ ತಿಂಗಳ ಹಿಂದೆಯಷ್ಟೇ ಅಮೆರಿಕದಲ್ಲಿ 3 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರು ಸೆ.6 ರಂದು ಚೇತರಿಸಿಕೊಂಡು ಮತ್ತೆ ತಾಯ್ನಾಡಿಗೆ ಮರಳಿದ್ದರು. ಗೋವಾ, ಮುಂಬೈ, ನವದೆಹಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಅವರ ಮೂಗಿಗೆ ಪೈಪ್ ಅಳವಡಿಸಲಾಗಿತ್ತು. ಹಾಗಿದ್ದರೂ ಕೂಡ ಬಜೆಟ್ ಅಧಿವೇಶದಲ್ಲಿ ಭಾಗವಹಿಸಿ ಬಜೆಟ್ ಮಂಡನೆ ಮಾಡಿದ್ದರು.
ಗೋವಾದ ತಮ್ಮ ಖಾಸಗಿ ನಿವಾಸದಲ್ಲೇ ಹೆಚ್ಚಿನ ಸಮಯ ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿದ್ದ ಅವರು ಅಲ್ಲಿಂದಲೇ ಸರ್ಕಾರದ ಆಡಳಿತವನ್ನು ನಿರ್ವಹಿಸುತ್ತಿದ್ದರು. ಆದರೆ ಫೆಬ್ರವರಿ ಅಂತ್ಯದಲ್ಲಿ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದರು.
ಅಂದಿನಿಂದಲೂ ಅವರ ಆರೋಗ್ಯದ ಮೇಲೆ ನಿಗಾವಹಿಸಿದ್ದ ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡುತ್ತಿದ್ದರು.