ಬೆಂಗಳೂರು,ಮಾ.16- ಮಿಷನ್-22 ಗುರಿಯೊಂದಿಗೆ ರಾಜ್ಯ ಲೋಕಸಭೆ ಚುನಾವಣೆ ಮಹಾಸಮರಕ್ಕೆ ಮುನ್ನುಗ್ಗಿರುವ ಬಿಜೆಪಿ ಸಪ್ತ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ.
ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರಕ್ಕೆ ಠಕ್ಕರ್ ನೀಡಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿ ಇಟ್ಟುಕೊಂಡಿದೆ. ಆದರೆ ಈ ಕ್ಷೇತ್ರಗಳಲ್ಲಿ ಎದುರಾಳಿಗಳಿಗೆ ಪ್ರಬಲ ಸ್ಪರ್ಧೆ ನೀಡುವ ಅಭ್ಯರ್ಥಿಗಳು ಸಿಗದಿರುವುದು ತಲೆಬಿಸಿ ಮಾಡಿದೆ.
ನಾಳೆ ಪಕ್ಷದ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, 28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ.
ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 17 ಕ್ಷೇತ್ರಗಳನ್ನು ಗೆದ್ದಿದ್ದ ಪಕ್ಷಕ್ಕೆ ಈ ಬಾರಿ ಅನೇಕ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ.
ಇಂಥ ಏಳು ಕ್ಷೇತ್ರಗಳು ಬಿಜೆಪಿಗೆ ತಲೆನೋವಾಗಿವೆ. ನಾಮಪತ್ರ ಸಲ್ಲಿಕೆಯ ದಿನ ಹತ್ತಿರ ಬರುತ್ತಿರುವಂತೆಯೇ ಬಿಜೆಪಿ ಪಾಳಯದಲ್ಲಿ ಆತಂಕ ಮನೆ ಮಾಡುತ್ತಿದೆ.ಮೋದಿ ಅಲೆಯನ್ನು ಉಪಯೋಗಿಸಿಕೊಳ್ಳುವ ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆಸುತ್ತಿದೆ.ಏಳು ಕ್ಷೇತ್ರಗಳೆಂದರೆ ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ ಮತ್ತು ಹಾಸನ.
ರಾಜ್ಯದಲ್ಲಿ 22 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿರುವ ಬಿಜೆಪಿಗೆ 8 ಕ್ಷೇತ್ರಗಳಲ್ಲಿ ಸರಿಯಾದ ಅಭ್ಯರ್ಥಿಗಳೇ ಇಲ್ಲವಾಗಿದೆ. ಇಂಥ ಸ್ಥಿತಿಯಲ್ಲಿ ಬಿಜೆಪಿಯ ಗುರಿಯ ಕನಸು ಹೇಗೆ ನನಸಾಗುತ್ತದೆ ಎಂಬುದು ಯಕ್ಷ ಪ್ರಶ್ನೆ.
ಬಳ್ಳಾರಿ:
ಹಲವು ವರ್ಷಗಳ ಕಾಲ ತನ್ನ ಭದ್ರಕೋಟೆ ಎನಿಸಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಉಪಚುನಾವಣೆಯಲ್ಲಿ ಸೋತಿತ್ತು. ರೆಡ್ಡಿ ಸಹೋದರರ ಅನುಪಸ್ಥಿತಿಯಲ್ಲಿ ಬಿಜೆಪಿ ನೆಲೆಯನ್ನು ಮರಳಿಗಿಟ್ಟಿಸಲು ಪರದಾಡುತ್ತಿದೆ. ಬಿ. ಶ್ರೀರಾಮುಲು ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದು ಬಿಜೆಪಿಗೆ ಇನ್ನಷ್ಟು ಹತಾಶೆ ತಂದಿದೆ.ಕಾಂಗ್ರೆಸ್ ಪಕ್ಷದಿಂದ ಬಿ.ನಾಗೇಂದ್ರ ಅವರನ್ನು ಸೆಳೆಯುವ ಪ್ರಯತ್ನ ಯಶಸ್ವಿಯಾಗಿಲ್ಲ.
ಒಂದು ಕಾಲದಲ್ಲಿ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಅವರ ಪ್ರಭಾವವಿದ್ದ ಬಳ್ಳಾರಿಯಲ್ಲಿ ಈಗ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹರಸಾಹಸ ಪಡಬೇಕಾಗಿದೆ.ಕಾಂಗ್ರೆಸ್‍ನಿಂದ ಹಾಲಿ ಸಂಸದ ವಿ.ಎಸ್.ಉಗ್ರಪ್ಪ ಕಣಕ್ಕಿಳಿಯಲಿದ್ದಾರೆ.ಆದರೆ, ಬಿಜೆಪಿ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ 2.40 ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜೆ.ಶಾಂತ ಸೋಲು ಕಂಡಿದ್ದರು.ಈ ಸೋಲು ಬಿಜೆಪಿಗೆ ಭಾರಿ ಹಿನ್ನಡೆ ಉಂಟುಮಾಡಿದೆ.ಉಗ್ರಪ್ಪ ಅವರಿಗೆ ಪ್ರತಿಸ್ಪರ್ಧೆ ನೀಡುವ ಅಭ್ಯರ್ಥಿಯಾಗಿ ಪಕ್ಷ ಹುಡುಕಾಟ ನಡೆಸುತ್ತಿದೆ.
ನಾಗೇಂದ್ರ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ಕೊಟ್ಟು ಬರಲು ತಯಾರಿಲ್ಲ. ಶ್ರೀರಾಮುಲು ಅವರು ತಮ್ಮ ಸಹೋದರಿ ಜೆ.ಶಾಂತಾ ಅವರನ್ನ ಕಣಕ್ಕಿಳಿಸಲು ಸಿದ್ಧರಿಲ್ಲ. ನಾಗೇಂದ್ರ ಅವರ ಸಹೋದರ ವೆಂಕಟೇಶ್ ಹಾಗೂ ದೇವೇಂದ್ರ ಅವರ ಹೆಸರುಗಳು ಬಳ್ಳಾರಿ ಕ್ಷೇತ್ರದ ಟಿಕೆಟ್‍ಗೆ ಕೇಳಿಬರುತ್ತಿದೆ.ಆದರೆ ಇವರು ಕಾಂಗ್ರೆಸ್ಸನ್ನು ಮಣಿಸುವಷ್ಟು ಪ್ರಬಲವಾಗಿಲ್ಲ. ಇದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಚಿತ್ರದುರ್ಗ
ಕಾಂಗ್ರೆಸ್‍ನ ಭದ್ರಕೋಟೆಯಾಗಿರುವ ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಮಾಜಿ ಸಂಸದ ಜನಾರ್ದನ ಸ್ವಾಮಿ, ಮಾದಾರ ಚೆನ್ನಯ್ಯ ಮತ್ತು ಮಾನಪ್ಪ ವಜ್ಜಲ್ ಅವರ ಹೆಸರು ಕೇಳಿಬರುತ್ತಿದೆ.ಆದರೆ, ಮಾದಾರ ಚೆನ್ನಯ್ಯ ಅವರು ಸ್ಪರ್ಧೆಗೆ ಒಪ್ಪುತ್ತಿಲ್ಲ. ಮಾನಪ್ಪ ವಜ್ಜಲ್ ಅವರು ಸೂಕ್ತ ಅಭ್ಯರ್ಥಿಯಲ್ಲವೆಂಬ ಅಭಿಪ್ರಾಯವಿದೆ.
ಹಾಲಿ ಕಾಂಗ್ರೆಸ್‍ನ ಬಿ.ಎನ್.ಚಂದ್ರಪ್ಪ ಚಿತ್ರದುರ್ಗ ಕ್ಷೇತ್ರದ ಸಂಸದರು. 2019ರ ಚುನಾವಣೆಗೂ ಅವರು ಅಭ್ಯರ್ಥಿಯಾಗಲಿದ್ದಾರೆ.ಅವರಿಗೆ ಪ್ರತಿಸ್ಪರ್ಧೆ ನೀಡುವ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸುತ್ತಿದೆ.ಮಾಜಿ ಸಂಸದ ಜನಾರ್ದನ ಸ್ವಾಮಿ ಅವರ ಹೆಸರು ಕೇಳಿಬರುತ್ತಿದೆ.ಅಭ್ಯರ್ಥಿ ಇನ್ನೂ ಅಂತಿಮಗೊಂಡಿಲ್ಲ.
ಬೆಂಗಳೂರು ಗ್ರಾಮಾಂತರ:
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಭದ್ರಕೋಟೆಯಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‍ನ ಡಿ.ಕೆ. ಸುರೇಶ್ ವಿರುದ್ಧ ಯಾರನ್ನು ಕಣಕ್ಕಿಳಿಸುವುದು ಎಂಬುದು ಬಿಜೆಪಿಗೆ ದೊಡ್ಡ ಪ್ರಶ್ನೆಯಾಗಿದೆ.ಇದ್ದುದರಲ್ಲಿ ಪ್ರಬಲರೆನಿಸಿರುವ ಸಿ.ಪಿ. ಯೋಗೇಶ್ವರ್ ಅವರು ಚುನಾವಣೆಯಲ್ಲಿ ನಿಲ್ಲಲು ಮನಸ್ಸು ಮಾಡುತ್ತಿಲ್ಲ. ತೇಜಸ್ವಿನಿ ರಮೇಶ್ ಅವರೂ ಸಿದ್ಧವಾಗಿಲ್ಲ. ಇನ್ನು, ರುದ್ರೇಶ್ ಅವರು ಡಿ.ಕೆ.ಸುರೇಶ್ ಅವರನ್ನು ಎದುರಿಸುವಷ್ಟು ಸಮರ್ಥರಲ್ಲ.
ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ ಹೆಸರು ಕೇಳಿಬರುತ್ತಿದೆ.ಆದರೆ, ಹಾಲಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿ ಯಾರು?ಎಂಬುದು ಪ್ರಶ್ನೆಯಾಗಿದೆ.
ಹಾಸನ :
ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯಲಿದ್ದು, ಅವರು ಪ್ರಚಾರ ಆರಂಭಿಸಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿ ಯಾರು?ಎಂಬುದು ಇನ್ನೂ ಖಚಿತವಾಗಿಲ್ಲ. ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎ.ಮಂಜು ಬಿಜೆಪಿ ಸೇರಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.ಆದರೆ, ಅದು ಅಂತಿಮಗೊಂಡಿಲ್ಲ.
ನಿವೃತ್ತ ಐಎಎಸ್ ಅಧಿಕಾರಿ ರಾಮೇಗೌಡರನ್ನು ಕರೆದು ಟಿಕೆಟ್ ಕೊಡುವ ಪ್ಲಾನ್ ಇದೆಯಾದರೂ, ಗೌಡರ ಕುಟುಂಬವನ್ನು ಎದುರುಹಾಕಿಕೊಂಡು ರಾಜಕೀಯ ಮಾಡುವ ಶಕ್ತಿ ಅವರಿಗಿಲ್ಲ. ಗೌಡರ ಕುಟುಂಬದ ವಿರುದ್ಧ ಇಷ್ಟು ವರ್ಷ ಹೋರಾಟ ಮಾಡಿಕೊಂಡು ಮಂತ್ರಿ ಸ್ಥಾನವನ್ನೂ ಅನುಭವಿಸಿದ್ದ ಅರಕಲಗೂಡು ಮಂಜು ಅವರು ಬಿಜೆಪಿ ಪಾಲಿಗೆ ಸದ್ಯಕ್ಕೆ ಅನಿವಾರ್ಯವಾಗಿದೆ.
ಎ. ಮಂಜು ಅವರು ಸ್ಪರ್ಧಿಸಿದರೆ ಬಾಗೂರು ಮಂಜೇಗೌಡ ಮೊದಲಾದ ಮುಖಂಡರೂ ಅವರಿಗೆ ಜೊತೆಯಾಗಿ ನಿಲ್ಲುವ ಸಂಭವವಿದೆ.ಆದರೆ, ಎ. ಮಂಜು ಅವರು ಬಿಜೆಪಿಗೆ ಬರುತ್ತಾರಾ ಎಂಬುದು ಇನ್ನೂ ನಿಶ್ಚಿತವಾಗಿಲ್ಲ. ಇದರ ಜೊತೆಗೆ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಇರುವ ಮತ್ತೊಂದು ಕ್ಷೇತ್ರವೆಂದರೆ ಮಂಡ್ಯ.ಇಲ್ಲಿ ಸುಮಲತಾ ಅಂಬರೀಷ್ ಅವರು ಪಕ್ಷೇತರವಾಗಿ ಸ್ಪರ್ಧಿಸಿದರೆ ಬಿಜೆಪಿಯು ಅವರಿಗೆ ಬಾಹ್ಯ ಬೆಂಬಲ ಕೊಡುವ ಸಾಧ್ಯತೆ ಇದೆ.ಒಂದು ವೇಳೆ ಸುಮಲತಾ ಕಣಕ್ಕಿಳಿಯದಿದ್ದರೆ ಬಿಜೆಪಿಯಿಂದ ಕಣಕ್ಕಿಳಿಯಬಲ್ಲ ಸಮರ್ಥರು ಯಾರೂ ಇದ್ದಂತಿಲ್ಲ.
ಚಾಮರಾಜನಗರ :
ಕಾಂಗ್ರೆಸ್‍ನ ಧ್ರುವನಾರಾಯಣ ಅವರು ಚಾಮರಾಜನಗರ ಕ್ಷೇತ್ರದ ಸಂಸದರು.ಇಲ್ಲಿ ಬಿಜೆಪಿಯಿಂದ ಅಭ್ಯರ್ಥಿ ಯಾರು?ಎಂಬ ಪ್ರಶ್ನೆಗೆ ಹಲವಾರು ಹೆಸರುಗಳು ಕೇಳಿಬರುತ್ತಿವೆ.
ಮಾಜಿ ಸಚಿವರಾದ ಎಂ.ಶಿವಣ್ಣ, ವಿ.ಶ್ರೀನಿವಾಸ ಪ್ರಸಾದ್ ಹೆಸರುಗಳು ಚಾಲ್ತಿಯಲ್ಲಿದೆ. ಇನ್ನು ನಿನ್ನೆಯಷ್ಟೇ ವಿ.ಶ್ರೀನಿವಾಸ ಪ್ರಸಾದ್ ಅವರು ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ತಮ್ಮ ಬೆಂಬಲಿಗರ ಜೊತೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.ಮೂಲಗಳ ಪ್ರಕಾರ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.ಕಾಂಗ್ರೆಸ್ ವಶದಲ್ಲಿರುವ ಕ್ಷೇತ್ರವನ್ನು ಪಡೆದುಕೊಳ್ಳಲು ಬಿಜೆಪಿ ತಂತ್ರ ರೂಪಿಸುತ್ತಿದೆ.
ರಾಯಚೂರು :
ಕಾಂಗ್ರೆಸ್ ನಾಯಕ, ಹಾಲಿ ಸಂಸದ ಬಿ.ವಿ.ನಾಯಕ್ ಅವರು ರಾಯಚೂರು ಕ್ಷೇತ್ರದಿಂದ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ.ಆದರೆ, ಬಿಜೆಪಿ ಅಭ್ಯರ್ಥಿ ಯಾರು?ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕಾಂಗ್ರೆಸ್ ವಶದಲ್ಲಿರುವ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಜೆಪಿ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ.
ಶ್ರೀರಾಮುಲು ಅವರ ನೆಂಟರಾದ ಸಣ್ಣ ಫಕೀರಪ್ಪ, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಮತ್ತು ದೇವದುರ್ಗ ಶಾಸಕ ಶಿವನಗೌಡ ನಾಯಕ್ ಅವರ ಹೆಸರು ರಾಯಚೂರು ಟಿಕೆಟ್ ರೇಸ್‍ನಲ್ಲಿದೆ.ಆಪರೇಷನ್ ಕಮಲದ ಆಡಿಯೋ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಶಿವನಗೌಡ ನಾಯಕ್ ಅವರು ಚುನಾವಣೆಗೆ ನಿಲ್ಲಲು ಒಪ್ಪುತ್ತಿಲ್ಲ. ಸಣ್ಣ ಫಕೀರಪ್ಪ ಅವರ ವರ್ಚಸ್ಸು ಕುಂದಿದೆ.ತಿಪ್ಪರಾಜು ಹವಾಲ್ದಾರ್ ಅವರು ಲೋಕಸಭೆಯಲ್ಲಿ ಸ್ಪರ್ಧಿಸುವ ಮಟ್ಟಕ್ಕೆ ಹೆಸರು ಮಾಡಿಲ್ಲ.
ಕಾಂಗ್ರೆಸ್‍ನ ಸಂಸದ ಬಿ.ವಿ. ನಾಯಕ್ ಅವರನ್ನ ಸೆಳೆಯುವ ಆಸೆಯಲ್ಲಿದ್ದ ಬಿಜೆಪಿಗೆ ಅದೂ ಸಾಧ್ಯವಾಗಿಲ್ಲ. ಕೊನೆಯ ಘಳಿಗೆಯಲ್ಲಿ ಬಿ.ವಿ. ನಾಯಕ್ ಅವರು ಕೈಕೊಟ್ಟಿರುವುದು ಬಿಜೆಪಿಗೆ ನಿರಾಸೆ ತಂದಿದೆ.
ಕೋಲಾರ ಕ್ಷೇತ್ರ
ಕೋಲಾರ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಇನ್ನೂ ಖಚಿತವಾಗಿಲ್ಲ. ಏಳು ಬಾರಿ ಗೆದ್ದಿರುವ ಕೆ.ಹೆಚ್. ಮುನಿಯಪ್ಪ ಅವರನ್ನು ಸೋಲಿಸಲು ಬಿಜೆಪಿಗೆ ಸೂಕ್ತ ಅಭ್ಯರ್ಥಿಗಳು ಸಿಗುತ್ತಿಲ್ಲ. ಡಿ.ಎಸ್. ವೀರಯ್ಯ, ಚಲವಾದಿ ನಾರಾಯಣಸ್ವಾಮಿ, ಚಿ.ನಾ. ರಾಮು ಮತ್ತು ನಿವೃತ್ತ ಅಧಿಕಾರಿ ರಮೇಶ್ ಬಾಬು ಅವರು ಕೋಲಾರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಈ ನಾಲ್ವರೂ ಕೂಡ ಮುನಿಯಪ್ಪಗೆ ಪೈಪೋಟಿ ನೀಡುವಷ್ಟು ಪ್ರಬಲರಾಗಿಲ್ಲ. ಆದರೆ, ಅಭ್ಯರ್ಥಿ ಯಾರಾಗಲಿದ್ದಾರೆ?ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.