ಎಟಿಎಂ ಕಾರ್ಡ್ ಇಲ್ಲದೆಯೂ ಹಣ ಡ್ರಾ ಮಾಡಬಹುದು! ಹೇಗೆ ಗೊತ್ತಾ?

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ YONO ಕ್ಯಾಶ್ ಸೇವೆಯನ್ನು ಆರಂಭಿಸಿದ್ದು, ಈ ಮೂಲಕ ಎಟಿಎಂ ಕಾರ್ಡ್ ಇಲ್ಲದೆಯೇ ಹಣ ಡ್ರಾ ಮಾಡುವ ಅವಕಾಶವನ್ನು ಒದಗಿಸಿದೆ.

ಎಸ್‌ಬಿಐನ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್ಫಾರ್ಮ್ನಲ್ಲಿ You Only Need One (YONO) ನ ಭಾಗವಾಗಿರುವ ಕಾರ್ಡ್ ರಹಿತ ನಗದು ಹಿಂಪಡೆಯುವಿಕೆ ಸೇವೆಯು ದೇಶದ 16,500 ಎಟಿಎಂಗಳಲ್ಲಿ ಲಭ್ಯವಿದೆ. ಅಂತಹ ಎಸ್‌ಬಿಐ ಎಟಿಎಂಗಳನ್ನು ಯಾನೋ ಕ್ಯಾಶ್ ಪಾಯಿಂಟ್ ಎಂದು ಕರೆಯಲಾಗುತ್ತದೆ. ಈ ಮೂಲಕ ಎಸ್‌ಬಿಐ ವಿನೂತನ ಸೇವೆ ನೀಡುತ್ತಿರುವ ಭಾರತದ ಮೊದಲ ಬ್ಯಾಂಕ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎಟಿಎಂ ಕಾರ್ಡ್‌ಗಳನ್ನು ನಕಲು ಮಾಡಿ ವಂಚಿಸುವ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಈ ನೂತನ ಸೇವೆಯನ್ನು ಆರಂಭಿಸಿದ್ದು, ಗ್ರಾಹಕರು ತಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ YONO ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಎಸ್‌ಬಿಐ ಎಟಿಎಂ ಅಥವಾ ಯುನೋ ಕ್ಯಾಶ್ ಪಾಯಿಂಟ್ ಗಳಲ್ಲಿ ಎಟಿಎಂ ಕಾರ್ಡ್ ಬಳಸದೇ ಹಣ ಡ್ರಾ ಮಾಡಿಕೊಳ್ಳಬಹುದು.

ಹಣ ಡ್ರಾ ಮಾಡುವುದು ಹೇಗೆ?

ಯುನೋ ಕ್ಯಾಶ್ ಪಾಯಿಂಟ್ ಗಳಲ್ಲಿ ಹಣ ಡ್ರಾ ಮಾಡಲು ಎರಡು ಹಂತದ ಪ್ರಕ್ರಿಯೆಯಿದ್ದು, ಮೊದಲು ಗ್ರಾಹಕರು ಆಂಡ್ರಾಯ್ಡ್ ಮೊಬೈಲ್ ನಲ್ಲಿ YONO ಆಪ್ ಇನ್ಸ್ಟಾಲ್ ಮಾಡಿಕೊಂಡು ನಂತರ ವ್ಯವಹಾರಕ್ಕಾಗಿ ಪಿನ್ ಸೆಟ್ಟಿಂಗ್ ಮಾಡಬೇಕು. ಬಳಿಕ ಯುನೋ ಕ್ಯಾಶ್ ಪಾಯಿಂಟ್ ನಲ್ಲಿ ಹಣ ಡ್ರಾ ಮಾಡಲು ಮನವಿ ಸಲ್ಲಿಸಿದಾಗ ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ 6 ಅಂಕಿಗಳ ಪಿನ್ ಇರುವ ಎಸ್ಎಂಎಸ್ ಬರುತ್ತದೆ. ಆ ಪಿನ್ ಅನ್ನು ಮೆಷಿನ್ ನಲ್ಲಿ ನಮೂದಿಸಿ ಹಣ ಡ್ರಾ ಮಾಡಿಕೊಳ್ಳಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ