ಎಚ್​ಡಿಕೆ ಮನವಿ ಮೇರೆಗೆ ನಿಖಿಲ್ ಗೆಲುವಿಗೆ ಮಂಡ್ಯ ಚುನಾವಣಾ ಅಖಾಡಕ್ಕೆ ಇಳಿಯಲ್ಲಿದ್ದಾರೆ ಡಿಕೆಶಿ!

ಮಂಡ್ಯ: ಕಾಂಗ್ರೆಸ್​ ಪಕ್ಷದ ಯಾವುದೇ ಸಮಸ್ಯೆ ಪರಿಹಾರಕ್ಕೆ ರಾಜ್ಯ ನಾಯಕರು ಹಾಗೂ ಹೈಕಮಾಂಡ್​ ಮುಂದೆ ಬರುವ ಹೆಸರು ಡಿಕೆ ಶಿವಕುಮಾರ್​. ಡಿಕೆಶಿ ಕಾಂಗ್ರೆಸ್​ಗೆ ಒಂದು ರೀತಿಯ ಆಪತ್ಭಾಂದವ ಇದ್ದ ಹಾಗೆ. ಶಿವಕುಮಾರ್​ ಪ್ರಭಾವ ಜೆಡಿಎಸ್​ ಕೂಡ ಚೆನ್ನಾಗಿಯೇ ಅರಿವಿದೆ. ಮೈತ್ರಿ ಸರ್ಕಾರ ರಚನೆ ವೇಳೆ ಡಿಕೆ ಶಿವಕುಮಾರ್​ ವಹಿಸಿದ ಪಾತ್ರದಿಂದಾಗಿ ಕುಮಾರಸ್ವಾಮಿಗೆ ಮತ್ತಷ್ಟು ಹತ್ತಿರವಾದರು. ಇದಾದ ಬಳಿಕ ಡಿಕೆಶಿ- ಎಚ್​ಡಿಕೆ ಆತ್ಮೀಯತೆ ಇನ್ನಷ್ಟು ಹೆಚ್ಚಿತು. ಇದೇ ಆಪ್ತತೆ ಮೇಲೆ ಕುಮಾರಸ್ವಾಮಿ ಈಗ ಮಗನ ಗೆಲ್ಲಿಸುವ ಹೊಣೆಯನ್ನು ಡಿಕೆ ಶಿವಕುಮಾರ್​ ಅವರಿಗೆ ನೀಡಿದ್ದಾರೆ.

ಮಂಡ್ಯದಲ್ಲಿ ನಿಖಿಲ್​ ಗೆಲುವಿಗೆ ಕಾಂಗ್ರೆಸ್​ ನಾಯಕರೇ ಅಡ್ಡಿಯಾಗುವ ಸೂಚನೆ ಅರಿತ ಜೆಡಿಎಸ್​ ನಾಯಕರು ಈಗಾಗಲೇ ಈ ಕುರಿತು ಅವರ ಗಮನಕ್ಕೆ ತಂದಿದ್ದಾರೆ.

ಡಿ.ಕೆ. ಶಿವಕುಮಾರ್​ ಕೂಡ ರಾತ್ರೋರಾತ್ರಿ ಕಾಂಗ್ರೆಸ್​ ನಾಯಕರಿಗೆ ಕ್ಲಾಸ್​ ತೆಗೆದುಕೊಂಡಿದ್ದರು. ಶಿವಕುಮಾರ್​ ನಡವಳಿಕೆ ರೆಬೆಲ್​ ಕಾಂಗ್ರೆಸ್​ ನಾಯಕರಲ್ಲಿ ಇನ್ನಷ್ಟು ಸಿಟ್ಟು ಮೂಡುವಂತೆ ಮಾಡಿತು. ಇದಾದ ಬಳಿಕ ಕೊಂಚ ತಣ್ಣಾಗಿರುವ ಡಿಕೆ ಶಿವಕುಮಾರ್​ ಸುಮಲತಾ ನಿರ್ಧಾರದ ಬಳಿಕ ಮುಂದಿನ ನಡೆ ಕುರಿತು ತೀರ್ಮಾನ ಮಾಡೋಣ ಎಂದು ಕುಮಾರಸ್ವಾಮಿಗೆ ತಿಳಿಸಿದ್ದಾರೆ.

ಈಗಾಗಲೇ ಎಸ್​ಎಂ ಕೃಷ್ಣ ಅವರನ್ನು ಭೇಟಿಯಾಗಿರುವ ಸುಮಲತಾ ಬಿಜೆಪಿಗೆ ಹೋಗುತ್ತಾರಾ ಅಥವಾ ಪಕ್ಷೇತರರಾಗಿ ಸ್ಪರ್ಧಿಸುತ್ತಾರಾ ಎಂಬ ಬಗ್ಗೆ ಸುಮಲತಾ ಮಾ.18ಕ್ಕೆ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಲತಾ ನಿಲುವಿನ ಬಳಿಕ ಮುಂದಿನ ನಡೆಯ ಬಗ್ಗೆ ಚರ್ಚಿಸೋಣ ಎಂದಿದ್ದಾರೆ.

ಈಗಾಗಲೇ ಕ್ಷೇತ್ರದಲ್ಲಿ ನಿಖಿಲ್​ ಪರ ಒಲವು ಯಾವ ರೀತಿ ಇದೆ ಎಂಬ ಕುರಿತು  ಆಪ್ತ ಸಚಿವರು, ಜೆಡಿಎಸ್​ ಮುಖಂಡರಿಂದ ಕುಮಾರಸ್ವಾಮಿ ಮಾಹಿತಿ ಪಡೆದಿದ್ದಾರೆ.

ಕ್ಷೇತ್ರದಲ್ಲಿ ಮೂಡಿರುವ ವಿರೋಧಿ ಅಲೆಯನ್ನು ಹೇಗೆ ಸಕಾರಾತ್ಮಕವಾಗಿ ರೂಪಿಸಬಹುದು ಎಂಬ ಕುರಿತು ಚರ್ಚೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ