ನವದೆಹಲಿ: ಪಾಕಿಸ್ತಾನ, ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರರನ್ನು ಹಸ್ತಾಂತರಿಸಬೇಕು. ಈ ಮೂಲಕ ಪಾಕಿಸ್ತಾನ ವಿಶ್ವಕ್ಕೆ ಶಾಂತಿ ಸಂದೇಶ ರವಾನಿಸಬಹುದು ಎಂದು ಕೇಂದ್ರ ಸರ್ಕಾರ ಒತ್ತಾಯಿಸಿದೆ.
ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾದ ಸಾಕಷ್ಟು ಉಗ್ರರಿದ್ದು, ಅವರನ್ನು ಹಸ್ತಾಂತರಿಸುವ ಮೂಲಕ ಪಾಕಿಸ್ತಾನದ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಬಹುದು.
ಅಲ್ಲದೇ ಭಾರತದೊಂದಿಗೆ ಆರೋಗ್ಯಪೂರ್ಣ ಸಂಬಂಧ ಹೊಂದಲು ಸಾಧ್ಯವಾಗಲಿದೆ ಎಂದು ಭಾರತ ಹೇಳಿದೆ.
ಜೈಷ್ – ಇ-ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಅನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸುವ ಕುರಿತು ಭಾರತ ವಿಶ್ವಸಂಸ್ಥೆಯ ಮೇಲೆ ಒತ್ತಡ ಹೇರುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ. ಪುಲ್ವಾಮಾ ದಾಳಿಯ ನಂತರ, ಭಾರತ ಪಾಕಿಸ್ತಾನದ ಮೇಲೆ ಭೂಗತ ದೊರೆ ದಾವೂದ್ ಇಬ್ರಾಹಿಂ ಹಾಗೂ ಸೈಯದ್ ಸಲಾಹುದ್ದಿನ್ ಅನ್ನು ಹಸ್ತಾಂತರಿಸುವಂತೆ ಒತ್ತಾಯಿಸುವ ಸಾಧ್ಯತೆಯಿದೆ.
1993ರ ಮುಂಬೈ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ತಂಡದ ಮುಖ್ಯಸ್ಥ ಸೈಯದ್ ಸಲಾ ಹುದ್ದೀನ್ ಅಲಿಯಾಸ್ ಮೊಹಮದ್ ಯೂಸುಫ್ ಶಾ ಅನ್ನು ಅಮೆರಿಕ ಈಗಾಗಲೇ ‘ಜಾಗತಿಕ ಉಗ್ರ ‘ ಎಂದು ಘೋಷಿಸಿದೆ. ಈತ ಭಾರತದಲ್ಲಿನ 50ಕ್ಕೂ ಹೆಚ್ಚು ಭಯೋತ್ಪಾದನಾ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈತನ ಮೇಲೆ ಶ್ರೀನಗರದ ಭದ್ರತಾ ಪಡೆಯ ಮೇಲೆ ದಾಳಿ, ಅಪಹರಣ ಹಾಗೂ ಹವಾಲಾ ದಂಧೆಯ ಆರೋಪಗಳಿವೆ.
ಪಾಕಿಸ್ತಾನ ಅನವಶ್ಯಕವಾಗಿ ಈ ಉಗ್ರರನ್ನು ಬೆಂಬಲಿಸುತ್ತಿದೆ. ಇದು ಜಾಗತಿಕ ಮಟ್ಟದಲ್ಲಿ ಯಾವುದೆ ಪ್ರಭಾವ ಬೀರುವುದಿಲ್ಲ ಎಂದು ಭಾರತದ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.