ನವದೆಹಲಿ: ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಡ್ಯಾನಿಶ್ ಅಲಿ ಪಕ್ಷ ತೊರೆದು ಬಿಎಸ್ಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್ ತೊರೆದು ಉತ್ತರ ಪ್ರದೇಶದಿಂದ ಸ್ಪರ್ಧಿಸಲು ಡ್ಯಾನಿಶ್ ಅಲಿ ಮುಂದಾಗಿದ್ಧಾರೆ ಎನ್ನಲಾಗಿದೆ. ದಶಕಗಳಿಂದ ಜೆಡಿಎಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರೂ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಬೇಸರ ಅವರಲ್ಲಿತ್ತು ಎನ್ನಲಾಗಿದ್ದು, ಇದೇ ಕಾರಣಕ್ಕೀಗ ಪಕ್ಷ ತೊರೆದು ಮಾಯಾವತಿಯವರ ಬಿಎಸ್ಪಿ ಪಕ್ಷದಿಂದ ಚುನಾವಣೆ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಡ್ಯಾನಿಶ್ ಅಲಿ ಜೆಡಿಎಸ್ ರಾಜ್ಯಸಭಾ ಸ್ಥಾನ ಕೇಳಿದ್ದರು ಎನ್ನಲಾಗಿದೆ. ಆದರೆ ಜೆಡಿಎಸ್ನಿಂದ ರಾಜ್ಯಸಭೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಚುನಾವಣಾ ಅದೃಷ್ಟ ಪರೀಕ್ಷೆಗೆ ಅವರೀಗ ಮುಂದಾಗಿದ್ದಾರೆ. ಡ್ಯಾನಿಶ್ ಅಲಿಯನ್ನು ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಆಪ್ತರೊಬ್ಬರು ಚುನಾವಣೆ ಹೊಸ್ತಿಲಲ್ಲಿರುವಾಗ ಪಕ್ಷಾಂತರ ಮಾಡಿದಂತಾಗಿದೆ.
ಇನ್ನೊಂದು ಮೂಲದ ಪ್ರಕಾರ ದೇವೇಗೌಡರ ಸಮ್ಮತಿಯ ಮೇರೆಗೆ ಡ್ಯಾನಿಶ್ ಅಲಿ ಬಿಎಸ್ಪಿ ಸೇರ್ಪಡೆಯಾಗಿದ್ದಾರೆ. ಬಿಎಸ್ಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದರೆ ಡ್ಯಾನಿಶ್ ಅಲಿ ಗೆಲುವು ಸಾಧಿಸಬಹುದು. ಅದರ ಜತೆಗೆ ಬಿಎಸ್ಪಿ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಬಾಂಧವ್ಯವೂ ಬೆಳೆಯಲಿದೆ ಎಂಬ ಲೆಕ್ಕಾಚಾರವಿದೆ ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ ಈಗಾಗಲೇ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಡ್ಯಾನಿಶ್ ಅಲಿ ಉತ್ತರ ಪ್ರದೇಶದ ಹಾಪುರ್ ಕ್ಷೇತ್ರದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿಯಲಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಲ್ಲೂ ಡ್ಯಾನಿಶ್ ಅಲಿ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ರಾಜ್ಯದಲ್ಲಿ ಬಿಎಸ್ ಪಿ-ಜೆಡಿಎಸ್ ಮೈತ್ರಿಯಾಗುವುದಕ್ಕೂ ಪ್ರಮುಖ ಪಾತ್ರವಹಿಸಿದ್ದರು. ಜೆಡಿಎಸ್ನಲ್ಲಿದ್ಧಾಗ ದೇವೇಗೌಡರಿಂದ ಏನೂ ಕೇಳಲಿಲ್ಲ. ದೆಹಲಿಯಲ್ಲಿ ಅವರು ಹೇಳಿದ ಎಲ್ಲಾ ಕೆಲಸಗಳನ್ನು ನಿರ್ವಹಿಸಿದ್ದೇನೆ. ಮುಂದೆ ಮಾಯಾವತಿ ಹೇಳಿದ ಕೆಲಸ ಮಾಡುತ್ತೇನೆ ಎಂದು ಡ್ಯಾನಿಶ್ ಅಲಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಜೆಡಿಎಸ್ 1 ಸ್ಥಾನವನ್ನು ಬಿಎಸ್ ಪಿಗೆ, ಉತ್ತರಪ್ರದೇಶದಲ್ಲಿ 1 ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಡುವ ಬಗ್ಗೆ ಚರ್ಚೆ ಆಗಿತ್ತು. ರಾಜ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಆದ ಹಿನ್ನೆಲೆಯಲ್ಲಿ ಜೆಡಿಎಸ್ ಗೆ ಟಿಕೆಟ್ ನೀಡಲು ಬಿಎಸ್ ಪಿ ನಕಾರ ಎತ್ತಿತ್ತು. ಹೀಗಾಗಿ ಡ್ಯಾನಿಶ್ ಅಲಿ ದೇವೇಗೌಡರ ಸಲಹೆ ಮೇರೆಗೆ ಬಿಎಸ್ ಪಿ ಚಿಹ್ನೆಯಡಿ ಉತ್ತರಪ್ರದೇಶದಿಂದ ಸ್ಪರ್ಧಿಸಲಿದ್ದಾರೆ.