ಬೆಂಗಳೂರು, ಮಾ.16- ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಮಾ.18 ರಂದು ಬೆಂಗಳೂರಿನಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಸಾಫ್ಟ್‍ವೇರ್ ಇಂಜಿನಿಯರ್‍ಗಳ ಜೊತೆ ನಗರದಲ್ಲಿ ಸಂವಾದ ನಡೆಸಲಿದ್ದಾರೆ.
ಮಾ.18 ರಂದು ಬೆಳಗ್ಗೆ 11ಗಂಟೆಗೆ ಕಲಬುರಗಿಗೆ ಆಗಮಿಸಲಿರುವ ರಾಹುಲ್‍ಗಾಂಧಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮಾ.7 ರಂದು ಕಲಬುರಗಿಯಲ್ಲಿ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿರುವುದರಿಂದ ರಾಹುಲ್‍ಗಾಂಧಿ ಪ್ರವಾಸ ಗಮನ ಸೆಳೆದಿದೆ.
ನಂತರ ಕಲಬುರಗಿಯಿಂದ ಬೆಂಗಳೂರಿಗೆ ಆಗಮಿಸುವ ರಾಹುಲ್‍ಗಾಂಧಿ ಸಂಜೆ 5 ಗಂಟೆಗೆ ಮಾನ್ಯತಾ ಟೆಕ್‍ಪಾರ್ಕ್‍ನಲ್ಲಿ ಆ್ಯಂಪೈರ್ ಸಭಾಂಗಣದಲ್ಲಿ ಸಾಫ್ಟವೇರ್ ಇಂಜಿನಿಯರ್‍ಗಳು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರ ಜೊತೆ ಸಂವಾದ ನಡೆಸಲಿದ್ದಾರೆ.
ವಿದ್ಯಾವಂತ ವರ್ಗ ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ವರು ಬಿಜೆಪಿಗೆ ಹೆಚ್ಚು ಬೆಂಬಲ ನೀಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾಗಿ ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ರಾಹುಲ್‍ಗಾಂಧಿ ಈ ಕ್ಷೇತ್ರದ ಉದ್ಯೋಗಿಗಳ ಜೊತೆ ಚರ್ಚೆಗೆ ಮುಂದಾಗಿರುವುದು ಕುತೂಹಲ ಕೆರಳಿಸಿದೆ.
ಈ ಮೊದಲು ಕೆಲವೆಡೆ ರಾಹುಲ್‍ಗಾಂಧಿ ಸಂವಾದ ನಡೆಸುವಾಗ ಮೋದಿ ಪರವಾಗಿ ಘೋಷಣೆಗಳು ಕೇಳಿ ಬಂದಿದ್ದು, ಇರಿಸು-ಮುರಿಸಿನ ವಾತಾವರಣ ನಿರ್ಮಾಣವಾಗಿತ್ತು. ಬೆಂಗಳೂರಿನಲ್ಲಿ ಆ ರೀತಿಯ ವಾತಾವರಣ ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ವಹಿಸಲು ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ.