ಜೂಜಾಟ ನಡೆಸುತ್ತಿದ್ದ ನಾಲ್ವರ ಗಡಿಪಾರಿಗೆ ಜಿಲ್ಲಾಧಿಕಾರಿ ಆದೇಶ

Varta Mitra News

ತುಮಕೂರು,ಮಾ.15-ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಮಟ್ಕಾ ಜೂಜಾಟ ನಡೆಸುತ್ತಿದ್ದ ನಾಲ್ವರನ್ನು ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ತುಮಕೂರು ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಟಿಪ್ಪುನಗರದ ಭಾಷಾ(60),ನಜರ್‍ಬಾದ್‍ನ ಗಿಡ್ಡು(42), ಪಿ.ಎಚ್.ಕಾಲೋನಿಯ ಮುಕ್ತಿಯಾರ್(37) ಮತ್ತು ಹೆಗ್ಡೆ ಕಾಲೋನಿಯ ಸಿಖಂದರ್(36) ಗಡಿಪಾರಾದವರು.

ಈ ನಾಲ್ವರುತಿಲಕ್‍ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮಟ್ಕಾ ಜೂಜಾಟದಲ್ಲಿ ತೊಡಗಿ ಕೂಲಿಕಾರ್ಮಿಕರು ಮತ್ತು ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡು ಮೋಸ ಮಾಡಿ ಅದರಿಂದ ಬಂದ ಹಣದಲ್ಲಿ ಮೋಜು, ಮಸ್ತಿ ಮಾಡತ್ತಿದ್ದರು.
ಈ ನಾಲ್ವರು ಆರೋಪಿಗಳ ಮೇಲೆ ಅನೇಕ ಬಾರಿ ಮಟ್ಕಾ ಜೂಜಾಟ ಪ್ರಕರಣಗಳು ದಾಖಲಾಗಿದ್ದು,ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಶಿಕ್ಷೆಯಾಗಿದ್ದರೂ ಸಹ ತಮ್ಮ ಚಾಳಿಯನ್ನು ಮುಂದುವರೆಸಿದ್ದರು.

ಮುಂಬರುವ ಲೋಕಸಭಾ ಚುನಾವಣೆಯನ್ನು ಮುಕ್ತವಾಗಿ ಹಾಗೂ ನಿರ್ಭೀತಿಯಿಂದ ನಡೆಸುವ ಸಲುವಾಗಿ ತುಮಕೂರು ಜಿಲ್ಲೆಯಿಂದ ಈ ನಾಲ್ವರನ್ನು ಚುನಾವಣೆ ಅವಧಿ ಮುಗಿಯುವವರೆಗೆ ಗಡಿಪಾರು ಮಾಡುವಂತೆ ಕೋರಿ ತಿಲಕ್‍ಪಾರ್ಕ್ ಠಾಣೆಯ ಸಬ್‍ಇನ್‍ಸ್ಪೆಕ್ಟರ್ ಲಕ್ಷ್ಮಯ್ಯ ಹಾಗೂ ಸಿಪಿಐ ರಾಧಾಕೃಷ್ಣ ಅವರು ವರದಿಯನ್ನು ತಯಾರಿಸಿ ಎಸ್ಪಿ ಕೋನ ವಂಶಿಕೃಷ್ಣ ಅವರಿಗೆ ಸಲ್ಲಿಸಿದ್ದರು.
ಎಸ್ಪಿ ಅವರು ಈ ವರದಿಯನ್ನು ಪರಿಶೀಲಿಸಿ ಚುನಾವಣೆ ಮುಗಿಯುವವರೆಗೂ ತುಮಕೂರು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರಿಗೆ ಅಂತಿಮ ವರದಿ ಸಲ್ಲಿಸಿದ್ದರು.

ಈ ವರದಿ ಅನ್ವಯ ಜಿಲ್ಲಾಧಿಕಾರಿಯವರು ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆ ಪ್ರಕ್ರಿಯೆಗಳು ಮುಗಿಯುವರೆಗೂ ಈ ನಾಲ್ವರನ್ನು ಗಡಿಪಾರು ಮಾಡಿ ಆದೇಶಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಅಕ್ರಮ ದಂಧೆಗಳಲ್ಲಿ ತೊಡಗಿ ಅವರ ವಿರುದ್ಧ ಪ್ರಕರಣಗಳು ದಾಖಲಾಗಿ ಅವರುಗಳಿಗೆ ಎಚ್ಚರಿಕೆ ನೀಡಿದ್ದರೂ ಸಹ ತಮ್ಮ ಹಳೆ ಚಾಳಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವವರ ವಿರುದ್ಧ ಗಡಿಪಾರು ಮಾಡಲು ವರದಿ ಸಲ್ಲಿಸುವಂತೆ ಜಿಲ್ಲೆಯ ಎಲ್ಲ ಠಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ