ಮೈಸೂರು ಕ್ಷೇತ್ರ ಟಿಕೆಟ್‍ಗಾಗಿ ಕಾಂಗ್ರೇಸ್ಸಿನಲ್ಲಿ ಪೈಪೋಟಿ

ಮೈಸೂರು, ಮಾ.15- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯಶಂಕರ್ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವುದಾಗಿ ಬಿಜೆಪಿಯಿಂದ ಕರೆತಂದಿದ್ದಾರೆ. ಆದರೆ, ಈಗ ಕಾಂಗ್ರೆಸ್‍ನಲ್ಲೂ ಟಿಕೆಟ್‍ಗಾಗಿ ಪೈಪೋಟಿ ಆರಂಭವಾಗಿದೆ.

ಕಾಂಗ್ರೆಸ್‍ನಿಂದ ವಿಜಯಶಂಕರ್ ಅವರಿಗೆ ಟಿಕೆಟ್ ನೀಡಬೇಕೆಂದು ಸಿದ್ದರಾಮಯ್ಯ ಅವರು ಪಟ್ಟು ಹಿಡಿದಿದ್ದಾರೆ. ಅತ್ತ ಕಾಂಗ್ರೆಸಿಗರೂ ಆದ ಮೈಸೂರು ಜಿಲ್ಲಾಧ್ಯಕ್ಷ ವಿಜಯಕುಮಾರ್, ಬ್ರಿಜೇಶ್ ಪಟೇಲ್ ಹಾಗೂ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಅವರ ಮೊಮ್ಮಗ ಸೂರಜ್ ಹೆಗಡೆ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಹಾಗೆಯೇ ಮಾಜಿ ಶಾಸಕ ವಾಸು ಅವರು ಸಹಾ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ನಾಲ್ವರಲ್ಲಿ ಯಾರಿಗೆ ಟಿಕೆಟ್ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಏತನ್ಮಧ್ಯೆ ಸಿದ್ದರಾಮಯ್ಯ ಅವರು ವಿಜಯಶಂಕರ್ ಅವರಿಗೆ ಟಿಕೆಟ್ ಕೊಡಬೇಕು. ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದು ಪಟ್ಟು ಹಿಡಿದಿದ್ದಾರೆ.

ಒಂದು ವೇಳೆ ಸಿದ್ದು ಅವರ ಮಾತಿಗೆ ಮನ್ನಣೆ ನೀಡಿ ವಿಜಯಶಂಕರ್ ಅವರಿಗೆ ಟಿಕೆಟ್ ನೀಡಿದ್ದೇ ಆದರೆ ಹಳೆಯ ಕಾಂಗ್ರೆಸಿಗರು ವಿಜಯಶಂಕರ್ ಅವರನ್ನು ಬೆಂಬಲಿಸುವರೇ ಎಂಬ ಪ್ರಶ್ನೆ ಉದ್ಬವವಾಗಿದೆ.

ವಿಜಯಶಂಕರ್ ಅವರು ಇದುವರೆಗೂ ಬಿಜೆಪಿಯಲ್ಲಿದ್ದು, ಇತ್ತೀಚೆಗಷ್ಟೇ ಕಾಂಗ್ರೆಸ್‍ಗೆ ಸೇರಿದ್ದು, ಇವರಿಗೆ ತಕ್ಷಣ ಹೇಗೆ ಪಕ್ಷದಿಂದ ಟಿಕೆಟ್ ನೀಡುತ್ತಾರೆ ಎಂದೂ ಸಹ ಸ್ಥಳೀಯ ಕಾಂಗ್ರೆಸಿಗರು ಅಪಸ್ವರ ಎತ್ತಿದ್ದಾರೆ.

ಹಾಗಾಗಿ ಈ ನಾಲ್ವರ ಪೈಕಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಅಭ್ಯರ್ಥಿ ಅಂತಿಮವಾದ ನಂತರವೇ ಚುನಾವಣೆ ಕಾವು ಏರಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ