
ಕೊಳ್ಳೇಗಾಲ, ಮಾ.15- ಪ್ರಸ್ತುತ ಲೋಕಸಭಾ ಚುನಾವಣೆಗೆ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ನಿಂದ ಹಾಲಿ ಸಂಸದ ಆರ್. ಧ್ರುವನಾರಾಯಣ್ ಕಣಕ್ಕಿಳಿಯಲಿದ್ದು, ಎದುರಾಳಿ ಬಿಜೆಪಿ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸದಿರುವುದು ಕುತೂಹಲ ಕೆರಳಿಸಿದರೆ ಸ್ಥಳಿಯ ಚುನಾವಣಾ ಕಣ ಕಳೆಗುಂದಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದರೂ ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಹಲವು ಆಕಾಂಕ್ಷಿ ಗಳು ಕಾತರರಾಗಿದ್ದು. ಬಿಜೆಪಿ ನಾಯಕರು ಯಾರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಾರೆ ಎಂಬುದರ ಮೇಲೆ ಕಳೆದೆರಡು ತಿಂಗಳಿನಿಂದ ಕ್ಷೇತ್ರದ ಮೇಲೆ ಬಿಜೆಪಿಯ ಹಲವು ನಾಯಕರ ಕಣ್ಣಿದೆ.
ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಸಚಿವ ಕೋಟೆ ಶಿವಣ್ಣ, ನಿವೃತ್ತ ಐಎಫ್ಎಸ್ ಅಧಿಕಾರಿ ಡಾ.ರಾಜು, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ಅಳಿಯ ಡಾ.ಮೋಹನ್ ರವರು ತಾವು ಆಕಾಂಕ್ಷಿಗಳು ಎಂದು ಹೇಳಿಕೊಂಡಿದ್ದು, ಈ ಸಂದೇಶವನ್ನು ಪಕ್ಷದ ರಾಜ್ಯ ಮತ್ತು ಕೇಂದ್ರ ನಾಯಕರಿಗೆ ರವಾನಿಸಿದ್ದರು ಹಾಗಾಗಿ ಈ ಹಲವರಲ್ಲಿ ಯಾರಿಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಅಲ್ಲದೆ ಆರ್.ಧ್ರುವನಾರಾಯಣ್ಗೆ ಸಾಂಪ್ರದಾಯಿಕ ಎದುರಾಳಿಯಾಗಿದ್ದ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಸಹ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವುದು ಒಂದು ವೇಳೆ ಕಾಂಗ್ರೆಸ್ಗೆ ಸೇರ್ಪಡೆಯಾಗದೆ ಬಿಜೆಪಿಯಲ್ಲೇ ಇದ್ದಿದ್ದರೆ ಎ.ಆರ್.ಕೃಷ್ಣಮೂರ್ತಿ ಅವರಿಗೆ ಅವಕಾಶ ಸಿಗುತ್ತಿತ್ತೇನೋ ? ಈ ಹಿಂದೆ ನಡೆದ ಚುನಾವಣೆಯಲ್ಲಿ ಇವರು ಆರ್.ಧ್ರುವನಾರಾಯಣ್ ವಿರುದ್ಧ ಒಂದು ಮತದಿಂದ ಸೋಲನ್ನಪ್ಪಿದ್ದರು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರ್ಪಡೆ ಗೊಂಡಿರುವುದರಿಂದ ಬಿಜೆಪಿ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿದೆ.
ಕೇಂದ್ರದಲ್ಲಿ ಶತಾಯ-ಗತಾಯ ಮತ್ತೊಮ್ಮೆ ಅಧಿಕಾರ ಹಿಡಿಯಬೇಕೆಂಬ ಹಠದಲ್ಲಿ ಬಿದ್ದಿರುವ ಬಿಜೆಪಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮೇಲೂ ಕಣ್ಣಿಟ್ಟಿದೆ. ಮಾಜಿ ಸಚಿವ ಹಾಗೂ ಹಿರಿಯ ನಾಯಕ ವಿ. ಶ್ರೀನಿವಾಸ್ ಪ್ರಸಾದ್ ಈ ಲೋಕಸಭಾ ಕ್ಷೇತ್ರದಿಂದ 5 ಭಾರಿ ಆಯ್ಕೆಯಾಗಿ ಕೇಂದ್ರ ಸಚಿವರೂ ಆಗಿದ್ದವರು.
ಹಾಗಾಗಿ ಈ ಭಾಗದಲ್ಲಿ ಅವರ ಪ್ರಭಾವವಿದ್ದು ಅವರು ಯಾರನ್ನು ಸೂಚಿಸುತ್ತಾರೆ ಎಂಬುದರ ಮೇಲೆ ನಿರ್ಧಾರವಾಗಿತ್ತು. ಹಾಗಾಗಿ ಮಾಜಿ ಶಾಸಕ ಭಾರತಿ ಶಂಕರ್ ಅವರ ಹೆಸರನ್ನು ಶಿಫಾರಸು ಮಾಡಿದ್ದರು ಎಂದು ಹೇಳಲಾಗಿತ್ತು.
ಈಗಾಗಲೆ 2 ಬಾರಿ ಜಯಗಳಿಸಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಧ್ರುವನಾರಾಯಣ ಎದುರಿಸ ಬಲ್ಲ ಸಮರ್ಥ ನಾಯಕರು ಮೇಲ್ಕಂಡ ಆಕಾಂಕ್ಷಿಗಳಲ್ಲಿ ಯಾರು ಇಲ್ಲ ಎಂಬುದನ್ನು ಮನಗಂಡ ಬಿಜೆಪಿ ಧ್ರುವನಾರಾಯಣ ಗೆಲುವಿಗೆ ಕಡಿವಾಣ ಹಾಕಲು ಮುಂದಾಗಿದ್ದು. ಧ್ರುವನಾರಾಯಣ್ ಎದುರು ಅವರ ರಾಜಕೀಯ ಗುರು ಶ್ರೀನಿವಾಸ್ಪ್ರಸಾದ್ ಅವರನ್ನು ಕಣಕ್ಕಿಳಿಸಲು ತಯಾರಿ ನಡೆಸಿತ್ತು ಎಂದು ಹೇಳಲಾಗುತ್ತಿತ್ತು. ಆದರೆ, ಪ್ರಸಾದ್ ನಾನು ಸ್ಪರ್ಧೆ ಮಾಡುವುದಿಲ್ಲ, ನಾನು ಹೇಳಿದವರಿಗೆ ಟಿಕೆಟ್ ನೀಡಿ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದು, ಬಿಜೆಪಿಯಿಂದ ನೀವೇ ಕಣಕ್ಕಿಳಿಯಬೇಕು. ಚುನಾವಣಾ ವೆಚ್ಚವನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಮನವೊಲಿಸುವ ಪ್ರಯತ್ನವೂ ನಡೆದಿತ್ತು ಎನ್ನಲಾಗಿದೆ.
ಶ್ರೀನಿವಾಸ್ ಪ್ರಸಾದ್ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದರೆ ಈ ಭಾರಿ ಚುನಾವಣೆ ಗುರು ಶಿಷ್ಯರ ನಡುವೆ ನಡೆಯಲಿದೆ.