ಸುಮಲತಾರವರಿಗೆ ಬಿಜೆಪಿ ಬೆಂಬಲ: ರಾಷ್ಟ್ರೀಯ ನಾಯಕರ ಜತೆ ಮಾತುಕತೆ ನಡೆಸಿದ್ದೇನೆ ಎಂದ ಎಸ್.ಎಂ.ಕೃಷ್ಣ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿರುವ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿಯಿಂದ ಬಿ ಫಾರಂ ನೀಡುವುದು ಅಥವಾ ಅವರ ಸ್ಪರ್ಧೆಗೆ ಬೆಂಬಲ ನೀಡುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಮುಖಂಡರ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಸುಮಲತಾ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ರಾಜಕಾರಣದ ಬಗ್ಗೆ ಇಂದು ಚರ್ಚೆ ನಡೆಸಿದ್ದೇವೆ. ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ನಾವು ನಿಗಾವಹಿಸಿದ್ದೇವೆ ಎಂದರು.

ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ಸಿದ್ದರಾಮಯ್ಯ ಅವರು ಎರಡೂವರೆ ಲಕ್ಷ ಮತಗಳನ್ನು ಪಡೆದಿದ್ದರು.ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಬಿಜೆಪಿಗೆ ಮಂಡ್ಯದ ಜನ ಬೆಂಬಲ ವ್ಯಕ್ತಪಡಿಸಿದ್ದರು.ಸುಮಲತಾ ಅವರ ಸ್ಪರ್ಧೆ ಬಗ್ಗೆ ನಿನ್ನೆ ನನ್ನನ್ನು ಭೇಟಿಯಾದ ಆರ್.ಅಶೋಕ್ ಅವರು ಚರ್ಚೆ ಮಾಡಿದ್ದರು.

ಸುಮಲತಾ ಅವರು ಮಂಡ್ಯದಲ್ಲಿ ಸ್ಪರ್ಧಿಸುವುದು ಸೂಕ್ತ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.ಅದಕ್ಕೆ ನನ್ನ ಸಹಮತವೂ ಇದೆ.ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿ ಸಹಾಯ ಮಾಡಲು ಕ್ರಮ ಕೈಗೊಳ್ಳುತ್ತೇನೆ. ನಾನೀಗ ಬಿಜೆಪಿಯ ಸದಸ್ಯ. ಮಂಡ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಕುಟುಂಬ ರಾಜಕಾರಣವನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಸುಮಲತಾ ಅವರು ಸ್ಪರ್ಧೆ ಮಾಡುವ ಬಗ್ಗೆ ಮಾ.18ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೂ ನಾವು ಕಾದು ನೋಡುತ್ತೇವೆ ಎಂದರು.

ಪ್ರಧಾನಿ ನರೇಂದ್ರಮೋದಿ ಅವರು ಐದು ವರ್ಷಗಳಲ್ಲಿ ದೇಶದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ಮರಳಿ ಪ್ರಧಾನಿಯಾಗಬೇಕು ಎಂದ ಎಸ್‍ಎಂಕೆ, ಮಹಾಘಟ್‍ಬಂಧನ್ ಬಗ್ಗೆ ಲೇವಡಿ ಮಾಡಿದರು.

ದೇಶದಲ್ಲಿ ಕಾಂಗ್ರೆಸ್ ಈಗ ಅಪ್ರಸ್ತುತ ಎನಿಸುತ್ತಿದೆ. ಮಹಾಘಟ್‍ಬಂಧನ್‍ನ ಪ್ರಹಸನದಲ್ಲಿ ಉತ್ತರಪ್ರದೇಶದಲ್ಲಿ ಒಂದಾಗಿರುವ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಕಾಂಗ್ರೆಸ್‍ಗೆ ಕೇವಲ 2 ಸೀಟುಗಳನ್ನು ಮಾತ್ರ ಬಿಟ್ಟುಕೊಟ್ಟಿವೆ. ದೇಶದಲ್ಲಿ ಘಟಬಂಧನವೇ ಇಲ್ಲ ಇನ್ನು ಮಹಾಘಟ್‍ಬಂಧನ್ ಎಲ್ಲಿಂದ ಬರಬೇಕು ಎಂದು ವ್ಯಂಗ್ಯವಾಡಿದರು.

ಇದೇ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಮಾತನಾಡಿ, ಎಸ್.ಎಂ.ಕೃಷ್ಣ ಅವರು ಮಂಡ್ಯದಿಂದ ಬಂದು ಮುಖ್ಯಮಂತ್ರಿಯಾಗಿದ್ದವರು.ಅವರು ನಮ್ಮ ಹೆಮ್ಮೆ. ಇಂದು ಅವರ ಆಶೀರ್ವಾದ ಪಡೆಯಲು ಆಗಮಿಸಿದ್ದೇನೆ. ಹಲವಾರು ದಿನಗಳಿಂದ ಅವರನ್ನು ಭೇಟಿ ಮಾಡಬೇಕೆಂದು ಬಯಸಿದ್ದೆ. ಅದು ಇಂದು ಫಲಿಸಿದೆ.ಅವರ ಆಶೀರ್ವಾದವೂ ಸಿಕ್ಕಿದೆ ಎಂದರು.

ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್, ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವುದರಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಅವಕಾಶ ನಿರಳವಾಗಿವೆ. ಈಗಾಗಲೇ ನಾನು ಕ್ಷೇತ್ರಾದ್ಯಂತ ಪ್ರವಾಸ ಮಾಡಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇನೆ. ಸಾಕಷ್ಟು ಬೆಂಬಲ ಸಿಕ್ಕಿದೆ. ಅಂಬರೀಶ್ ಅಭಿಮಾನಿಗಳ ಶ್ರೀರಕ್ಷೆ ಇದೆ.ಮಾ.18ಕ್ಕೆ ನನ್ನ ನಿಲುವುಗಳನ್ನು ಪ್ರಕಟಿಸುತ್ತೇನೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ