ಮಂಡ್ಯ: ಮಂಡ್ಯ ಜಿಲ್ಲೆಯ ಜನರ ಋಣ ನನ್ನ ಹೃದಯದಲ್ಲಿದೆ. ಜನರ ಋಣ ತೀರಿಸಲು ನಾನು ಮಗನನ್ನು ಚುನಾವಣೆಗೆ ನಿಲ್ಲಿಸುತ್ತಿದ್ದೇನೆ. ಗೆಲ್ಲಿಸುವುದು ಬಿಡುವುದು ನಿಮಗೆ ಬಿಟ್ಟಿದ್ದು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಜಿಲ್ಲೆಯ ಋಣ ನನ್ನ ಹೃದಯದಲ್ಲಿದೆ. ಮಂಡ್ಯದವರು ನನ್ನನ್ನು ಹೆಮ್ಮರವಾಗಿಸಿದ್ದಾರೆ ಎಂದರು. ನಾನು ಹುಟ್ಟಿದ್ದು ಹಾಸನದಲ್ಲಿ. ರಾಜಕೀಯವಾಗಿ ನನಗೆ ಜನ್ಮ ಕೊಟ್ಟಿದ್ದು ರಾಮನಗರದ ಜನತೆ. ರಾಜಕೀಯವಾಗಿ ನನ್ನನ್ನು ಹೆಮ್ಮರವಾಗಿ ಬೆಳೆಸಿದ್ದು ಮಂಡ್ಯದ ಜನತೆ. ಈ ಜನತೆಯ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ. ನಿಮ್ಮ ಬೆಂಬಲದಿಂದಲೇ 2004ರಲ್ಲಿ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಿಎಂ ಆಗಿದ್ದೆ. ರಾಮನಗರದಲ್ಲಿ ವಿಧಾನಸಭೆ ಚುನಾವಣೆಗೆ ನಾನು ಒಂದು ದಿನ ಮತ ಕೇಳಲು ಹೋಗಿಲ್ಲ. ಅವರೇ ನನ್ನ ಮೇಲೆ ಪ್ರೀತಿ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಮಂಡ್ಯ ಜಿಲ್ಲೆಯ ಋಣವನ್ನು ನಾನು ಹೃದಯದಲ್ಲಿಟ್ಟುಕೊಂಡಿದ್ದೇನೆ. ಅದನ್ನ ಜನ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ನನ್ನ ಮಗ ನಿಖಿಲ್ ಕುಮಾರಸ್ವಾಮಿಯನ್ನ ಚುನಾವಣೆಗೆ ನಿಲ್ಲಿಸಬೇಕೆಂಬ ಯೋಚನೆಯೇ ಇರಲಿಲ್ಲ. ರವೀಂದ್ರ ಶ್ರೀಕಂಠಯ್ಯ ಅವರು ನಿಖಿಲ್ ಹೆಸರನ್ನು ಮೊದಲು ಹೇಳಿದ್ದು. ಅವರ ಮಾತು ಕೇಳಿ ನನಗೆ ನಡುಕ ಬಂತು. ಜನರ ಒತ್ತಾಯದ ಮೇಲೆ ನಿಖಿಲ್ ರಾಜಕೀಯಕ್ಕೆ ಕಾಲಿಟ್ಟಿದ್ದಾನೆ. ಜನರ ಸೇವೆ ಮಾಡಲು ಮಂಡ್ಯಕ್ಕೆ ಬಂದಿದ್ದಾನೆ. ನನಗೆ ಅಧಿಕಾರಿ ನೀಡಿ ನನಗೆ ನೀವು ಮರು ಜನ್ಮ ಕೊಟ್ಟಿದ್ದೀರ. ನನಗೆ ಬೆಂಬಲ ನೀಡಿದಂತೆ ನನ್ನ ಮಗನಿಗೂ ಪ್ರೀತಿ ಬೆಂಬಲ ನೀಡಿ ಎಂದು ಸಿಎಂ ಮನವಿ ಮಾಡಿಕೊಂಡಿದ್ದಾರೆ.
ನಿಖಿಲ್ ದೆಹಲಿಯಲ್ಲಿ ಸಂಸದನಾಗಿ ಮೆರೆಯುವುದಕ್ಕೆ ಬಂದಿಲ್ಲ. ಮಂಡ್ಯದಲ್ಲೇ ಬದುಕುವುದಕ್ಕೆ ನಿಖಿಲ್ ಬಂದಿದ್ದಾನೆ. ಮಂಡ್ಯ ಜಿಲ್ಲೆಯವರು ಒರಟರಲ್ಲ, ಮುಗ್ಧರು. ನಾವಿರುವವರೆಗೂ ನಿಮಗ್ಯಾವ ತೊಂದರೆಯಾಗುವುದಕ್ಕೂ ಬಿಡುವುದಿಲ್ಲ ಎಂದು ಸಿಎಂ ಆಶ್ವಾಸನೆ ನೀಡಿದರು.
ಇದೇ ವೇಳೆ ಅಂಬರೀಷ್ ಅವರ ವಿಚಾರ ಪ್ರಸ್ತಾಪಿಸಿದ ಸಿಎಂ, “ನನ್ನ-ಅಂಬರೀಶ್ ಪ್ರೀತಿ ಬಗ್ಗೆ ನಿಮಗೇನು ಗೊತ್ತಿದೆ? ಅವರ ತಮ್ಮನಾಗಿ ಅಂದು ನಿಮ್ಮ ಜತೆ ಬೆರೆತಿದ್ದೆ. ಅಂದು ರಕ್ಷಣಾ ಸಚಿವರಿಗೆ ಮನವಿ ಮಾಡಿ ಮಂಡ್ಯಕ್ಕೆ ಪಾರ್ಥಿವ ಶರೀರ ತರಲು ಪ್ರಯತ್ನಿಸಿದ್ದೆ. ಈಗ ಅಂಬರೀಶ್ ಆತ್ಮ ಏನು ಹೇಳುತ್ತದೆ ಯೋಚಿಸಿ?
ಆದರೆ ಅಂಬಿ ಅಭಿಮಾನಿಗಳು ನಮ್ಮ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ನನಗೆ ನಿಖಿಲ್ ಬೇರೆಯಲ್ಲ, ಅಂಬರೀಷ್ ಮಗ ಬೇರೆಯಲ್ಲ ಎಂದರು.