![pratap-simha-1522502149](http://kannada.vartamitra.com/wp-content/uploads/2018/05/pratap-simha-1522502149-508x381.jpg)
ಮೈಸೂರು,ಮಾ.14-ರಾಜ್ಯದ ಜನತೆ ಅಭಿವೃದ್ಧಿಯನ್ನು ನೋಡುತ್ತಾರೆ ಹೊರತು ಮೈತ್ರಿಯನ್ನು ನೋಡುವುದಿಲ್ಲ. ರಾಜಕೀಯ ಅನೈತಿಕತೆ ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ಒಂದಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಇಂದಿಲ್ಲಿ ಕುಟುಕಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಎದುರಾಳಿ ಬಗ್ಗೆ ನನಗೆ ಯಾವುದೇ ರೀತಿಯ ಭಯವಿಲ್ಲ. ನಾವು ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಜನತೆ ಮುಂದೆ ಹೋಗುತ್ತೇವೆ. ಜನರು ಸಹ ಅಭಿವೃದ್ಧಿಯನ್ನೇ ಬಯಸುತ್ತಾರೆ ಎಂದರು.
ಜನತೆ ಯಾವುದೇ ಜಾತಿ, ಹಣವನ್ನು ಬೆಂಬಲಿಸುವುದಿಲ್ಲ. ಯಾರು ಅಭಿವೃದ್ಧಿ ಮಾಡುತ್ತಾರೋ ಅವರ ಪರವಾಗಿ ನಿಲ್ಲುತ್ತಾರೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳು , ಯೋಜನೆಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇನೆ ಎಂದು ಹೇಳಿದರು.
ಈ ಬಾರಿಯೂ ನಿಮಗೆ ಟಿಕೆಟ್ ನೀಡಲಾಗುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರೇ ನಿನ್ನೆ ಹಾಲಿ ಸಂಸದರಿಗೂ ಟಿಕೆಟ್ ನೀಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ನನಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು.
ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಯಾವುದೇ ಗೊಂದಲವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಾವು ಈಗಾಗಲೇ ಲೋಕಸಭಾ ಚುನಾವಣೆಗಾಗಿ ಉತ್ತಮ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಕೇಂದ್ರದ ಯೋಜನೆಗಳನ್ನು ಫಲಾನುಭವಿಗಳಿಗೆ ಮನವರಿಕೆ ಮಾಡಿಕೊಟ್ಟು ಮತ ಯಾಚಿಸುತ್ತೇವೆ ಎಂದರು.
ವಕೀಲರಾದ ಮೇದಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಚುನಾವಣಾ ಪ್ರಚಾರ ಕುರಿತು ಮಾತನಾಡಿ, ರಾಷ್ಟ್ರದ ನಾಯಕರಿಗೆ ವಾಕ್ ಸ್ವಾತಂತ್ರ್ಯವಿದೆ. ಇದನ್ನು ನಿಷೇಧಿಸುವುದು ಅಪಹಾಸ್ಯಕ್ಕೀಡಾಗುತ್ತದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನಿಷೇಧ ಮಾಡಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಜೇಂದ್ರ, ಫಣೀಶ್, ಉಮೇಶ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.