ಬೆಂಗಳೂರು,ಮಾ.14-ಕುಟುಂಬ ರಾಜಕಾರಣ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಲೆ ಬಂದ ರಾಜಕೀಯ ವಿಚಾರಗಳಲ್ಲಿ ಪ್ರಾದೇಶಿಕ ಪಕ್ಷವನ್ನು ಪೇಚಿಗೆ ಸಿಲುಕಿಸಿದ ವಿಚಾರ ಇದು.
ನಟ ಅಂಬರೀಷ್ ಪತ್ನಿ ಸುಮಲತಾ ಮಂಡ್ಯ ಕ್ಷೇತ್ರದಿಂದ ಸ್ಫರ್ಧಿಸುವ ಅಭಿಲಾಷೆ ವ್ಯಕ್ತಪಡಿಸಿದ್ದರಾದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿದ್ದು, ಜೆಡಿಎಸ್ ರಾಷ್ಟ್ರಾದ್ಯಕ್ಷರ ಕುಟುಂಬದ ಕುಡಿಯನ್ನೇ ಸಂಸತ್ಗೆ ಕಳುಹಿಸಲು ನಿರ್ಧರಿಸಿದೆ.
ರಾಜ್ಯದಲ್ಲೂ ಯಾವುದೇ ಪಕ್ಷ ವಂಶಪಾರಂಪರ್ಯ ಅಥವಾ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ತಮ್ಮ ಜೊತೆಗೆ ತಮ್ಮ ಮಕ್ಕಳನ್ನೂ ರಾಜಕೀಯಕ್ಕೆ ಕೈಹಿಡಿದು ಕರೆತಂದಿದ್ದಾರೆ. ಆದರೆ ಈ ಸಂಪ್ರದಾಯನ್ನು ವ್ಯಾಪಕವಾಗಿ ಚಾಲ್ತಿಗೆ ತಂದವರು ಹಾಗೂ ಅದರ ಫಲ ಉಂಡವರು ಮಾತ್ರ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು.
ರಾಜ್ಯದ ನಾಲ್ಕನೇ ಮುಖ್ಯಮಂತ್ರಿ ನಿಜಲಿಂಗಪ್ಪನವರಿಂದ ಬಿಜೆಪಿಯ ಯಡಿಯೂರಪ್ಪನವರಿಗೆ ಬಹುತೇಕ ನಾಯಕರ ಮಕ್ಕಳು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ದಿವಂಗತ ನಿಜಲಿಂಗಪ್ಪ ಅವರ ಅಳಿಯ ರಾಜಶೇಖರನ್ ಕಾಂಗ್ರೆಸ್ನ ಹಿರಿಯ ನಾಯಕರಾದರೂ ಹೆಚ್ಚಾಗಿ ಗುರುತಿಸಿಕೊಂಡವರಲ್ಲ. ವೀರೇಂದ್ರ ಪಾಟೀಲ್ರ ಪುತ್ರ ಕೈಲಾಸನಾಥ ಪಾಟೀಲ್ ಕಲಬುರಗಿಯ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದರೂ ಇಂದು ಕ್ಷೇತ್ರ ಪುನರ್ ವಿಂಗಡನೆ ನಂತರ ಮಾಜಿ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಪುತ್ರ ದಿನೇಶ್ಗುಂಡೂರಾವ್ ರಾಜ್ಯ ಕಾಂಗ್ರೆಸ್ನ ಕಾರ್ಯಾಧ್ಯಕ್ಷರಾಗಿದ್ದಾರೆ. ಇನ್ನು ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಪುತ್ರಿ ಮಮತಾ ನಿಚ್ಚಾನಿ ಒಮ್ಮೆ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರೂ ನಂತರದಲ್ಲಿ ಅವರು ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಇವರ ಕುಟುಂಬದವರಾರು ರಾಜಕಾರಣದಲ್ಲಿ ಸದ್ಯ ಸಕ್ರಿಯವಾಗಿಲ್ಲ.
ಮಾಜಿ ಸಿಎಂ ಜೆ.ಎಚ್.ಪಟೇಲ್ ಅವರ ಪುತ್ರಿ ಮಹಿಮಾ ಪಟೇಲ್ ಒಮ್ಮೆ ಶಾಸಕರಾಗಿ ಆಯ್ಕೆಯಾದರೂ, ಮರು ಆಯ್ಕೆಗೆ ನಡೆಸಿದ ಪ್ರಯತ್ನ ಈಡೇರಲಿಲ್ಲ.
ಜೆಡಿಎಸ್, ಕಾಂಗ್ರೆಸ್ನಲ್ಲಿ ರಾಜಕಾರಣ ಮಾಡಿ ಹೊಸ ಪಕ್ಷ ಕಟ್ಟಿ ವಿಫಲರಾದ ಅವರು ಇದೀಗ ಸಂಯುಕ್ತ ಜನತಾದಳದಲ್ಲಿ ಗುರುತಿಸಿಕೊಂಡಿದ್ದಾರೆ.
ಜೆ.ಎಚ್.ಪಟೇಲ್ ರಾಜ್ಯದ ಸಿಎಂ ಆಗಿದ್ದ ವೇಳೆಯೇ ಬೆಂಗಳೂರು ಮಹಾನಗರ ಪಾಲಿಕೆಗೆ ಸ್ಪರ್ಧಿಸಲು ಯತ್ನಿಸಿ ತಮ್ಮ ತಂದೆಯ ಕೆಂಗಣ್ಣಿಗೆ ಗುರಿಯಾಗಿದ್ದ ತ್ರಿಶೂಲ್ ಪಾಣಿ ಪಟೇಲ್ ನಂತರದಲ್ಲಿ ಲೋಕಶಕ್ತಿ ಸಂಯುಕ್ತ ಜನತಾದಳ ಸೇರಿ ಹಲವು ಪಕ್ಷಗಳಲ್ಲಿ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳುವ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ.
ರಾಜಕಾರಣದಲ್ಲಿ ಯಶಸ್ಸು ಕಂಡ ಮತ್ತೊಂದು ಕುಟುಂಬ ಬಂಗಾರಪ್ಪ ಅವರ ಕುಟುಂಬ. ಇವರ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಎರಡು ಬಾರಿ ಶಾಸಕರಾಗಿ ಮಂತ್ರಿಯೂ ಆಗಿದ್ದರು. ತಮ್ಮ ತಂದೆ ನಡೆಸಿದ ಎಲ್ಲಾ ರಾಜಕೀಯ ಪ್ರಯೋಗಗಳಲ್ಲಿ ಪಾಲುದಾರರಾಗಿದ್ದರು. ಆದರೆ ಕೌಟುಂಬಿಕ ಕಲಹದ ಪರಿಣಾಮವಾಗಿ ಕೊನೆಯ ಹಂತದಲ್ಲಿ ಅವರು ನಡೆಸಿದ ಪ್ರಯೋಗವಾದ ಸಮಾಜವಾದಿ ಪಕ್ಷ ಮತ್ತು ಜಾತ್ಯಾತೀತ ಜನತಾದಳ ಸೇರ್ಪಡೆಯಿಂದ ಕುಮಾರ ಬಂಗಾರಪ್ಪ ದೂರವೇ ಉಳಿದರು. ಅಷ್ಟೇ ಅಲ್ಲ ತಮ್ಮ ತಂದೆಯವರ ಕರ್ಮಭೂಮಿ ಸೊರಬದಿಂದ ವಿಧಾನಸಭೆಗೆ ಆಯ್ಕೆಯಾಗುವ ಪ್ರಯತ್ನ ನಡೆಸಿ ವಿಫಲರಾದರು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಮಕ್ಕಳು-ಹಿರಿಯ ಪುತ್ರನಿಂದ ತೆರವಾದ ಈ ಸ್ಥಾನವನ್ನು ಬಂಗಾರಪ್ಪ ಅವರ ಕಿರಿಯಪುತ್ರ ಮಧು ಬಂಗಾರಪ್ಪ ತುಂಬಿದರು. ಸೊರಬದಿಂದ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದ ಮಧು ಬಂಗಾರಪ್ಪ ಕಳೆದ ಚುನಾವಣೆಯಲ್ಲಿ ಸೋಲುಂಡು ಇದೀಗ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಫರ್ಧಿಸುವ ತಯಾರಿ ನಡೆಸುತ್ತಿದ್ದಾರೆ. ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್ಕುಮಾರ್ ಕೂಡ ಆಗಾಗ್ಗೆ ಚುನಾವಣಾ ಕಣಕ್ಕೆ ಬಂದು ಹೋಗುತ್ತಿರುತ್ತಾರೆ.
ಮಾಜಿ ಸಿಎಂ ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜು ಬೊಮ್ಮಾಯಿ ಸಂಯುಕ್ತ ಜನತಾದಳದ ಮೂಲಕ ರಾಜಕೀಯ ಪ್ರವೇಶಿಸಿ ವಿಧಾನ ಪರಿಷತ್ ಗೆ ಆಯ್ಕೆಯಾದರು. ಅಖಿಲ ಭಾರತ ಪ್ರಗತಿಪರ ಜನತಾದಳದೊಂದಿಗೆ ಗುರುತಿಸಿಕೊಂಡ ಅವರು ನಂತರದಲ್ಲಿ ಬಿಜೆಪಿ ಸೇರ್ಪಡೆಯಾಗಿ ಶಾಸಕರಾಗಿ, ಮಂತ್ರಿಯೂ ಆದರು.
ಎಸ್.ಆರ್. ಬೊಮ್ಮಾಯಿ ಅವರ ಮತ್ತೊಬ್ಬ ಪುತ್ರ ಕೂಡ ರಾಜಕೀಯ ಪ್ರವೇಶ ಬಯಸಿದರೂ ನಂತರ ತಮ್ಮ ನಿಲುವು ಬದಲಿಸಿ ಉದ್ಯಮಿಯಾಗಿದ್ದಾರೆ. ಈಗ ಈ ಕುಟುಂಬದಿಂದ ಬಸವರಾಜ ಬೊಮ್ಮಾಯಿ ಮಾತ್ರ ಸಕ್ರಿಯ ರಾಜಕಾರಣಿಯಾಗಿದ್ದಾರೆ.
ಮಾಜಿ ಸಿಎಂ ಧರ್ಮಸಿಂಗ್ ಅವರ ಪುತ್ರ ಅಜಯ್ಸಿಂಗ್ ತಮ್ಮ ತಂದೆ ಪ್ರತಿನಿಧಿಸುತ್ತಿದ್ದ ಕಲಬುರಗಿಯ ಜೇವರ್ಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಮತ್ತೊಬ್ಬ ಪುತ್ರ ವಿಜಯ್ ಸಿಂಗ್ ಬೀದರ್ನಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಇಬ್ಬರೂ ಪುತ್ರರೂ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ.
ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯ ರಾಜಕಾರಣ ಪ್ರವೇಶಿಸಿದರು. ಮಂಗಳೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಕಣಕ್ಕಿಳಿಯಲು ಪ್ರಯತ್ನಿಸಿದರೂ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಲು ಸಾಧ್ಯವಾಗದೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಅಂದಿನಿಂದಲೂ ಸಕ್ರಿಯರಾಗಿರುವ ಇವರು ಉದ್ಯಮದ ಜೊತೆಗೆ ರಾಜಕಾರಣವನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಜಿಲ್ಲಾ ಪಂಚಾಯ್ತಿ ಮೂಲಕ ರಾಜಕಾರಣ ಆರಂಭಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ನಂತರ ವಿಧಾನಸಭಾ ಸದಸ್ಯರಾಗಿಯೂ ಆಯ್ಕೆಯಾಗಿದ್ದರು ಪ್ರಸ್ತುತ ಇವರು ಸಂಸದರಾಗಿದ್ದಾರೆ. ಇವರು ತಮ್ಮ ತಂದೆಯ ನೆರಳಿನಲ್ಲೇ ಸಾಗಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸೋದರ ಪ್ರದೀಪ್ ಶೆಟ್ಟರ್ ಒಮ್ಮೆ ವಿಧಾನ ಪರಿಷತ್ತಿಗೆ ಸ್ಪರ್ಧಿಸಿ ಸೋಲು ಕಂಡು ಇದೀಗ ಮತ್ತೆ ಆಯ್ಕೆಯಾಗುವ ಮೂಲಕ ಸಕ್ರಿಯರಾಗಿರುವುದು ಬಿಟ್ಟರೆ ಬೇರೆ ಯಾರೂ ಸಕ್ರಿಯರಾಗಿಲ್ಲ. ಮಾಜಿ ಸಿಎಂ ಸದಾನಂದಗೌಡ ಅವರ ಕುಟುಂಬದಲ್ಲೂ ಕೂಡಾ ಅವರನ್ನು ಬಿಟ್ಟರೆ ಬೇರೆಯಾರೂ ಸಕ್ರಿಯ ರಾಜಕಾರಣದಲ್ಲಿಲ್ಲ.
ಹೀಗೆ ರಾಜ್ಯದ ಎಲ್ಲಾ ಪ್ರಮುಖ ನಾಯಕರ ಮಕ್ಕಳು ಹಾಗೂ ಸಂಬಂಧಿಗಳು ಇಂದು ರಾಜಕೀಯವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಆದರೆ ಇವರ ಕಥೆ ಒಂದು ಬಗೆಯಾದರೆ ಜೆಡಿಎಸ್ ಕಥೆಯೇ ಬೇರೆ.
ರಾಮಕೃಷ್ಣ ಹೆಗಡೆ, ಜೆ.ಹೆಚ್. ಪಟೇಲ್ ಹೊರತು ಮೇಲೆ ಉಲ್ಲೇಖಿಸಿರುವ ಎಲ್ಲಾ ನಾಯಕರು ರಾಷ್ಟ್ರೀಯ ಪಕ್ಷದಲ್ಲಿ ಗುರುತಿಸಿಕೊಂಡವರು. ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಬರುವಂತೆ ಇವರ ಮಕ್ಕಳು ರಾಜಕೀಯಕ್ಕೆ ಬಂದಿದ್ದಾರೆ. ಈ ಪೈಕಿ ಕೆಲವರು ಮಾತ್ರ ಸಫಲರಾಗಿದ್ದಾರೆ. ಆದರೆ, ಜೆಡಿಎಸ್ ವಿಚಾರದಲ್ಲಿ ಹಾಗಲ್ಲ.
ರಾಜ್ಯದ ಇತಿಹಾಸದಲ್ಲೇ ಮಾಜಿ ಸಿಎಂ ಹಾಗೂ ಮಾಜಿ ಪ್ರಧಾನಿ ಒಬ್ಬರ ಪುತ್ರ ಶಾಸಕನಾದ ಮೊದಲ ಅವಧಿಯಲ್ಲೇ ಮುಖ್ಯಮಂತ್ರಿಯಾಗುವ ಮೂಲಕ ರಾಜ್ಯದ ರಾಜಕೀಯ ಚರಿತ್ರೆಯ ಪುಟಗಳಲ್ಲಿ ಕುಮಾರಸ್ವಾಮಿ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದಾರೆ. ಇವರ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿದ್ದಾರೆ.
ಹಿರಿಯ ಮಗ ಹೆಚ್.ಡಿ. ರೇವಣ್ಣ ಸಮ್ಮಿಶ್ರ ಸರಕಾರದಲ್ಲಿ ಪ್ರಮುಖ ಖಾತೆಯಲ್ಲಿದ್ದರೆ, ಅವರ ಪತ್ನಿ ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ. ಇವರ ಪುತ್ರ ಪ್ರಜ್ವಲ್ ರೇವಣ್ಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಲಿದ್ದಾರೆ.
ಕುಟುಂಬ ರಾಜಕಾರಣವನ್ನೇ ಜೀವನಪೂರ್ತಿ ಟೀಕಿಸುತ್ತಾ ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಗೊಂದು ದಿನ ಪುತ್ರ ವ್ಯಾಮೋಹಕ್ಕೆ ಸಿಲುಕಿಸಿದ್ದು ಇತಿಹಾಸ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಯತೀಂದ್ರ ಸಿದ್ದರಾಮಯ್ಯ ಮೊದಲ ಪರೀಕ್ಷೆಯಲ್ಲೇ ವಿಜೇತರಾದರು.
ಇನ್ನು ಮಲ್ಲಿಕಾರ್ಜುನ ಖರ್ಗೆ ಕೂಡ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ. ತಮ್ಮ ಜೀವಿತಾವಧಿಯಲ್ಲಿ ತಮ್ಮ ಪುತ್ರನನ್ನು ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗೆ ಕುಟುಂಬ ರಾಜಕಾರಣ ಎಂಬುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ.