ಬೆಂಗಳೂರು: ಬಸವಧರ್ಮ ಪೀಠದ ಅಧ್ಯಕ್ಷೆ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಾರ್ತಿ ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದಾರೆ.
ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು 7 ದಿನಗಳ ಹಿಂದೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಾತೆ ಮಹಾದೇವಿ ಇಂದು ಸಂಜೆ ಲಿಂಗೈಕ್ಯರಾಗಿದ್ದಾರೆ.
ಮಾತೆ ಮಹಾದೇವಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಬಸವಧರ್ಮ ಪೀಠಾಧ್ಯಕ್ಷೆಯಾಗಿದ್ದರು. ಗುರು ಲಿಂಗಾನಂದ ಅವರಿಂದ ಪ್ರಭಾವಿತರಾಗಿ ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದರು. ಇವರನ್ನು ಪ್ರಥಮ ಮಹಿಳಾ ಜಗದ್ಗುರು ಎಂದು ಭಕ್ತರು ಗುರುತಿಸಿದ್ದಾರೆ.
ಮಾರ್ಚ್ 13, 1946ರಂದು ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ಜನಿಸಿದ್ದ ಮಹಾದೇವಿ ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮ ಸ್ಥಾಪನೆ ಮಾಡಿ ಜನಾನುರಾಗಿ ಕೆಲಸ ಆರಂಭಿಸಿದ್ದರು. 5 ನೇ ಏಪ್ರಿಲ್ 1966 ಜಂಗಮ ದೀಕ್ಷೆ ಪಡೆದ ಮಾತೆ ಮಹಾದೇವಿ ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
ಉತ್ತಮ ವಾಗ್ಮಿ ಮತ್ತು ಸಾಹಿತಿಗಳಾಗಿದ್ದ ಮಾತೆ ಮಹಾದೇವಿ ಗುರು ಲಿಂಗಾನಂದರವರಿಂದ ಪ್ರಭಾವಿತರಾಗಿ ಸನ್ಯಾಸ ಸ್ವೀಕರಿಸಿದ್ದರು. 1980 ಬಸವ ಧರ್ಮ ಪ್ರಚಾರಕ್ಕೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. 1978 ಬೆಂಗಳೂರಿನ ಕುಂಬಳಗೋಡಿನಲ್ಲಿ ಬಸವ ಗಂಗೋತ್ರಿ ಆಶ್ರಮ ನಿರ್ಮಾಣ ಮತ್ತು 1975ರಂದು ಬೆಂಗಳೂರಿನ ರಾಜಾಜಿನಗರದಲ್ಲಿ ಬಸವ ಮಂಟಪ ಸ್ಥಾಪನೆ ಮಾಡಿದ್ದರು.
ಅವರ ‘ಹೆಪ್ಪಿಟ್ಟ ಹಾಲು’ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕಾರ ಲಭ್ಯವಾಗಿತ್ತು. ಶುಕ್ರವಾರ ಕೂಡಲ ಸಂಗಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವೇಳೆ ಮಾತೆ ಮಹಾದೇವಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು.