
ಮಂಡ್ಯ: ನಿಖಿಲ್ ಕುಮಾರಸ್ವಾಮಿ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧ ಮಾಡುತ್ತಿರುವ ಕುಮಾರಸ್ವಾಮಿ ಇಂದು ಅಧಿಕೃತವಾಗಿ ಘೋಷಣೆ ಮಾಡುವ ಮುನ್ನ ಗುರುವಾರ ರಾತ್ರಿ ಕ್ಷೇತ್ರದ ಜೆಡಿಎಸ್ ನಾಯಕರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ. ಅಲ್ಲದೆ ನಿಖಿಲ್ ಗೆಲುವಿಗೆ ಒಗ್ಗಟ್ಟಿನ ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಸುಮಲತಾ ಸ್ಪರ್ಧೆಯಿಂದಾಗಿ ಜೆಡಿಎಸ್ ನಾಯಕರಿಗೆ ಬಿಸಿ ತುಪ್ಪವಾಗಿರುವ ಕ್ಷೇತ್ರ ಈಗ ಜೆಡಿಎಸ್ ಪ್ರತಿಷ್ಟೆಯ ಕಣ ಕೂಡ ಹೌದು. ಮೈತ್ರಿ ಮೂಲಕ ಚುನಾವಣೆ ಎದುರಿಸುತ್ತಿದ್ದರೂ ಕ್ಷೇತ್ರದಲ್ಲಿನ ಪರಿಸ್ಥಿತಿ ಮಾತ್ರ ಬೇರೆಯಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮೆಲ್ನೋಟಕ್ಕೆ ತಮ್ಮ ಪರವಾಗಿದ್ದರೂ ಒಳಗೆ ನಮ್ಮ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಕುಮಾರಸ್ವಾಮಿ ಮುಂದೆ ದೂರಿದ್ದಾರೆ.
ಸುಮಲತಾಗೆ ಕಾಂಗ್ರೆಸ್ ನಾಯಕರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಅಲ್ಲದೆ, ಶ್ರೀರಂಗ ಪಟ್ಟಣದ ಮಾಜಿ ಶಾಸಕ ರಮೇಶ್ ಬಂಡಿಸಿದ್ಧೇಗೌಡ ಈಗಾಗಲೇ ಕಾಂಗ್ರೆಸ್ ನಾಯಕರ ಎಚ್ಚರಿಕೆಗೂ ಜಗ್ಗದೆ ಸುಮಲತಾ ಜೊತೆ ಕಾಣಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಮಾತ್ರ ಬೆಂಬಲಿಸಿದಂತೆ ಕಾಂಗ್ರೆಸ್ ನಾಯಕರು ತೋರ್ಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವರ್ತನೆಗೆ ಕಿಡಿಕಾರಿದರು.
ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ನಡೆ ಸರಿಯಿಲ್ಲ. ಕೆಲ ನಾಯಕರು ಒಳಗೊಳಗೇ ಮಸಲತ್ತು ಮಾಡುತ್ತಿದ್ದಾರೆ. ಆಂತರಿಕವಾಗಿ ಸುಮಲತಾಗೆ ಬೆಂಬಲ ನೀಡುತ್ತಿದ್ದಾರೆ. ರಾಜ್ಯ ‘ಕೈ’ ಹಿರಿಯ ನಾಯಕರೇ ಇದರ ಹಿಂದಿದ್ದಾರೆ. ಈ ಬಗ್ಗೆ ಹೈಕಮಾಂಡ್ಗೆ ದೂರು ನೀಡಿ ಎಂದು ಕುಮಾರಸ್ವಾಮಿ ಮುಂದೆ ಅಹವಾಲು ನೀಡಿದರು.
ಕಾರ್ಯಕರ್ತರ ಆರೋಪಗಳನ್ನು ಆಲಿಸಿದ ಕುಮಾರಸ್ವಾಮಿ, ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ನಡೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ತಲೆ ಕಡೆಸಿಕೊಳ್ಳಬೇಡಿ. ಅವರು ಏನೇ ಮಾಡಿದರೂ ಮಂಡ್ಯದಲ್ಲಿ ಸಮಸ್ಯೆ ಇಲ್ಲ. ಸಂದರ್ಭ ಬಂದಾಗ ದೆಹಲಿ ನಾಯಕರ ಗಮನಕ್ಕೆ ತರುವೆ. ಆದರೆ, ಕ್ಷೇತ್ರದಲ್ಲಿ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದಿದ್ದಾರೆ.
ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಪಕ್ಷಕ್ಕೆ ಹಾನಿ ನೀಡುವಂತ ಹೇಳಿಕೆ ನೀಡಬೇಡಿ. ಯಾರೇ ಆಗಲಿ ಹೇಳಿಕೆ ನೀಡುವಾಗ ಎಚ್ಚರವಿರಲಿ. ಸುಮಲತಾ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡಬೇಡಿ ಎಂದು ಇದೇ ವೇಳೆ ಸಚಿವರು, ಶಾಸಕರಿಗೆ ಸಭೆಯಲ್ಲಿ ಸಿಎಂ ಸೂಚನೆ ನೀಡಿದರು.
ಡಿಸಿ ತಮ್ಮಣ್ಣ, ಪುಟ್ಟರಾಜು ಹೆಗಲಿಗೆ ಜವಬ್ದಾರಿ: ರಾಜಕೀಯ ರಣರಂಗವಾಗಿ ಏರ್ಪಟ್ಟಿರುವ ಕ್ಷೇತ್ರದ ಜವಾಬ್ದಾರಿಯನ್ನು ಕುಮಾರಸ್ವಾಮಿ ಸಚಿವರಾದ ಡಿಸಿ ತಮ್ಮಣ್ಣ ಹಾಗೂ ಪುಟ್ಟರಾಜುವಿಗೆ ನೀಡಿದ್ದಾರೆ. ಜೆಡಿಎಸ್ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಸುಲಭವಲ್ಲ ಎಂಬ ಮಾತು ಕೇಳಿ ಬರುತ್ತಿರುವ ಹಿನ್ನಲೆ ಕ್ಷೇತ್ರದ ಸಚಿವರಿಗೆ ನಿಖಿಲ್ ಗೆಲ್ಲಿಸುವ ಹೊಣೆ ನೀಡಲಾಗಿದೆ. ಈ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುವ ಜವಬ್ದಾರಿ ಹೇಗೆ ಎಂಬ ಆತಂಕ ಕೂಡ ನಾಯಕರಲ್ಲಿ ಮನೆ ಮಾಡಿದೆ.
ಕ್ಷೇತ್ರದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಸಚಿವರು, ಶಾಸಕರು ಕೂಡ ತಲೆ ಕೆಡಿಸಿಕೊಂಡಿರುವ ಕುರಿತು ಅತೃಪ್ತ ನಾಯಕರ ಅಳಲು ತೊಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.