ಬೆಂಗಳೂರು, ಮಾ.14- ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಮಾರ್ಚ್ 16 ಕಡೆ ದಿನವಾಗಿದೆ.
ಎರಡನೆ ಹಂತದಲ್ಲಿ ನಡೆಯುವ ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ಮಾ.25ರ ವರೆಗೂ ಭಾರತೀಯ ಚುನಾವಣಾ ಆಯೋಗ ಕಾಲಾವಕಾಶ ನೀಡಿದೆ.
ಏ.18ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆದರೆ, ಏ.23ರಂದು ಉಳಿದ 14 ಕ್ಷೇತ್ರಗಳಿಗೆ ಎರಡನೆ ಹಂತದ ಮತದಾನ ನಡೆಯಲಿದೆ.
ಮೊದಲ ಹಂತದಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಎರಡನೆ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಪಟ್ಟಿಯಲ್ಲಿನ ಲೋಪದೋಷಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಆಯೋಗ ಪ್ರಕಟಿಸಿರುವ ರಾಜ್ಯದ ಒಟ್ಟು ಮತದಾರರ ಸಂಖ್ಯೆ 5,03,46,721 ಈ ಪೈಕಿ 2,54,94,711 ಪುರುಷ ಮತದಾರರಿದ್ದು, 2,48,47,292 ಮಹಿಳಾ ಮತದಾರರಿದ್ದಾರೆ. 4718 ಇತರೆ ಮತದಾರರು ಪರಿಷ್ಕøತ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.
ಸೂಕ್ಷ್ಮ-ಅತಿಸೂಕ್ಷ್ಮ ಮತಗಟ್ಟೆಗಳ ಪರಿಷ್ಕರಣೆ: ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ಶಂಕರ್ ಅವರು ಇಂದು ಬೆಂಗಳೂರಿನ ಕೆಆರ್ ಪುರ, ಪುಲಿಕೇಶಿನಗರ, ಬ್ಯಾಟರಾಯನಪುರ, ಹೆಬ್ಬಾಳ ಮತ್ತಿತರ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸೂಕ್ಷ್ಮ-ಅತಿಸೂಕ್ಷ್ಮ ಮತಗಟ್ಟೆಗಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಚುನಾವಣಾ ಚೆಕ್ಪೋಸ್ಟ್ ಸ್ಥಾಪನೆ ಕುರಿತಂತೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಚನೆ ನೀಡಿದ್ದಾರೆ.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಗುಲಾಬಿ ಬಣ್ಣದ ಮತಗಟ್ಟೆಗಳನ್ನು ಎಲ್ಲೆಲ್ಲಿ ಸ್ಥಾಪಿಸಬೇಕೆಂಬ ಬಗ್ಗೆ ಸ್ಥಳೀಯ ಚುನಾವಣಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿರುವ ಜಿಲ್ಲಾಧಿಕಾರಿಗಳು ಮತಗಟ್ಟೆ ಬಳಿ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಬಗ್ಗೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಲ್ಲದೆ, ವಿಕಲಚೇತನ ಮತದಾರರಿಗೆ ಒದಗಿಸಬೇಕಾಗಿರುವ ಸೌಲಭ್ಯಗಳ ಬಗ್ಗೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.