ಮಂಡ್ಯ, ಮಾ.14- ಜಿಲ್ಲೆಯ ಜೀವನಾಡಿ ಕಾವೇರಿ ನದಿ ನೀರು ಜೋಪಾನ ಮಾಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಅವರನ್ನು ಕಾಪಾಡಬೇಕೆಂದು ಮಾಜಿ ಶಾಸಕ ಮಧುಬಂಗಾರಪ್ಪ ತಿಳಿಸಿದ್ದಾರೆ.
ನಗರದಲ್ಲಿಂದು ಜೆಡಿಎಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತ ಯಾಚನೆ ಮಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಬಂಗಾರಪ್ಪನವರಿಗೆ ಮಂಡ್ಯದ ಜನ ಶಕ್ತಿ ತುಂಬಿದ್ದರು. ನಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಸ್ಥಾನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಕಾಣುತ್ತಿರುವುದಾಗಿ ನುಡಿದರು.
ನಿಖಿಲ್ ಕುಮಾರಸ್ವಾಮಿ ಅವರ ಜೊತೆ ಸಂಸತ್ಗೆ ಹೋಗಲಿ ಎಂದು ಶಿವಮೊಗ್ಗದಲ್ಲಿ ತಮ್ಮನ್ನು ಸೋಲಿಸಿರಬಹುದು. ಆದರೆ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಕಣಕ್ಕಿಳಿಸುತ್ತಿರುವ ಒಮ್ಮತದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕರೆ ನೀಡಿದರು.
ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲ ಖಾನ್ ಮಾತನಾಡಿ, ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಿಜವಾದ ಹಿಂದೂ ನಾಯಕ ಎಂದು ಬಣ್ಣಿಸಿದರು.
ಅಲ್ಪಸಂಖ್ಯಾತರಿಗೆ ಮೀಸಲು ಸೌಲಭ್ಯ ಕಲ್ಪಿಸಿದ್ದು ದೇವೇಗೌಡರು ಎಂದು ಶ್ಲಾಘಿಸಿದರು.
ಶಾಸಕ ಸುರೇಶ್ ಗೌಡ ಮಾತನಾಡಿ, ಯಾರು ಏನೇ ಟೀಕೆ ಮಾಡಿದರೂ ಸಂತೋಷದಿಂದ ಸ್ವೀಕರಿಸಿ ಎಂದರಲ್ಲದೆ ನಿಖಿಲ್ ಕುಮಾರಸ್ವಾಮಿ ಬೇರೆಯವರೆಂದು ಭಾವಿಸಬೇಡಿ. ನಮ್ಮ ಮನೆಯ ಮಗ ಎಂದರು.
ಶಾಸಕ ರವೀಂದ್ರ ಶೀಕಂಠಯ್ಯ ಮಾತನಾಡಿ, ದೇವೇಗೌಡರು ರಾಜ್ಯದ ರೈತರಿಗಾಗಿ ಹೋರಾಟ ಮಾಡುತ್ತಾ ಬಂದವರು. ತಮ್ಮ ಮಕ್ಕಳಂತೆಯೇ ರೈತರನ್ನು ಕಾಣುತ್ತಾರೆ ಎಂದರು.
ಸಂಸದ ಶಿವರಾಮೇಗೌಡ ಮಾತನಾಡಿ, ಐದು ಲಕ್ಷ ಮತಗಳಿಂದ ನಿಖಿಲ್ ಅವರನ್ನು ಗೆಲ್ಲಿಸುತ್ತೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಕರೆದು ನಮಗೆ ಟಿಕೆಟ್ ನೀಡಿದ್ದರು. ಇದನ್ನು ಕುಟುಂಬ ರಾಜಕಾರಣ ಎಂದು ಕೆಲವರು ಟೀಕಿಸುತ್ತಾರೆ. ನಾವೆಲ್ಲರೂ ಒಪ್ಪಿ ನಿಖಿಲ್ ಅವರನ್ನು ಕಣಕ್ಕಿಳಿಸಿದ್ದೇವೆ. ಜಿಲ್ಲೆಯ ಅಭಿವೃದ್ಧಿಗಾಗಿ ನಿಖಿಲ್ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿದರು.
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ, ನಮ್ಮದು ಕುಟುಂಬದಂತಹ ಪಕ್ಷ. ನಮ್ಮ ಕುಟುಂಬದ ನಾಯಕ ದೇವೇಗೌಡರು ಎಂದ ಅವರು, ದೇವೇಗೌಡರು ಈ ಬಾರಿ ಪ್ರಧಾನಿಯಾಗುವ ಸಾಧ್ಯತೆ ಇದೆ. ಅವರನ್ನು ಪ್ರಧಾನಿ ಮಾಡಲು ಜೆಡಿಎಸ್ನ್ನು ಬೆಂಬಲಿಸಿ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕರಾದ ಎಂ.ಶ್ರೀನಿವಾಸ್, ಡಾ.ಅನ್ನದಾನಿ, ಎಚ್.ವಿಶ್ವನಾಥ್ ಮತ್ತಿತರರು ಪಾಲ್ಗೊಂಡಿದ್ದರು.