ಮಂಡ್ಯ: ಲೋಕಸಭಾ ಚುನಾವಣೆಯ ಕಾಂಗ್ರೆಸ್- ಜೆಡಿಎಸ್ ಸೀಟು ಹಂಚಿಕೆ ಗೊಂದಲ ನಿನ್ನೆ ಇತ್ಯರ್ಥವಾಗಿದ್ದು, 8 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ.
ನಿನ್ನೆಯಷ್ಟೇ ಹಾಸನದಲ್ಲಿ ಬೃಹತ್ ಸಮಾವೇಶ ಮಾಡಿ ಹಿರಿಯ ಮಗ ಎಚ್.ಡಿ. ರೇವಣ್ಣನವರ ಮಗ ಪ್ರಜ್ವಲ್ನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದ ದೇವೇಗೌಡರು ಇಂದು ಇನ್ನೋರ್ವ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಅಭ್ಯರ್ಥಿಯನ್ನಾಗಿ ಘೋಷಿಸಲಿದ್ದಾರೆ.
ಇಂದು ಮಂಡ್ಯದಲ್ಲಿ ಬೃಹತ್ ಜೆಡಿಎಸ್ ಸಮಾವೇಶ ಏರ್ಪಡಿಸಲಾಗಿದ್ದು, ಮಂಡ್ಯದ ಅಭ್ಯರ್ಥಿಯನ್ನಾಗಿ ನಿಖಿಲ್ ಕುಮಾರಸ್ವಾಮಿಯವರನ್ನು ಘೋಷಣೆ ಮಾಡಲಾಗುವುದು. ನಿನ್ನೆ ಹಾಸನದಲ್ಲಿ ಸಚಿವ ರೇವಣ್ಣನವರ ಕುಟುಂಬ ಸಮ್ಮಿಲನವಾದಂತೆ ಇಂದು ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕುಟುಂಬ ವೇದಿಕೆಯೇರಲಿದೆ. ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ಸಮಾವೇಶ ನಡೆಯಲಿದ್ದು, ಮಂಡ್ಯದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಹೆಸರನ್ನು ಇಂದು ಅಧಿಕೃತವಾಗಿ ಘೋಷಣೆ ಮಾಡಲಾಗುವುದು.
ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಅವರನ್ನು ಕಣಕ್ಕೆ ಇಳಿಸಲು ಚಿಂತಿಸಲಾಗಿತ್ತು. ಆದರೆ, ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದ ಜೆಡಿಎಸ್ ಕೊನೆಗೂ ತಮ್ಮ ಪಕ್ಷದ ಅಭ್ಯರ್ಥಿಯನ್ನೇ ಅಖಾಡಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲಿಗೆ ದೇವೇಗೌಡರ ಕುಟುಂಬದ ಹೊಸ ತಲೆಮಾರಿನ ಇಬ್ಬರು ಯುವಕರು ಒಂದೇ ಬಾರಿಗೆ ರಾಜಕೀಯ ಪ್ರವೇಶ ಮಾಡಿದಂತಾಗಿದೆ. ಇನ್ನು, ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಅಧಿಕೃತವಾಗಿ ನಾಮಪತ್ರ ಸಲ್ಲಿಕೆಯೊಂದೇ ಬಾಕಿಯಿದೆ.
ನಿಖಿಲ್ ಸ್ಪರ್ಧೆಯ ಬಗ್ಗೆ ಮಂಡ್ಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಅಸಮಾಧಾನದ ನಡುವೆಯೇ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದೆ. ಬೆಳಗ್ಗೆ 11 ಗಂಟೆಗೆ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಮದ್ದೂರಿನಿಂದ ಮಂಡ್ಯಕ್ಕೆ ಬೃಹತ್ ಬೈಕ್ ರ್ಯಾಲಿ ಏರ್ಪಡಿಸಲಾಗಿದೆ.
ರ್ಯಾಲಿ ಮೂಲಕ ನಿಖಿಲ್ ಕುಮಾರಸ್ವಾಮಿಯನ್ನು ಕರೆತರಲು ಸಿದ್ಧತೆ ನಡೆಸಲಾಗಿದೆ. ಸಿಎಂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ಎಚ್.ಡಿ. ದೇವೇಗೌಡರ ಕುಟುಂಬದವರು ಇಂದಿನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.