ನವದೆಹಲಿ: ಕೆಲವು ಜನ ಪಾಕ್ ಪ್ರಧಾನಿ ಇಮ್ರಾನ್ರನ್ನು ಒಳ್ಳೆಯ ಮುತ್ಸದ್ಧಿ ಎಂದು ಹೇಳುತ್ತಾರೆ. ಒಂದು ವೇಳೆ ಅವರು ಮುತ್ಸದ್ಧಿಯೇ ಆಗಿದ್ದರೆ, ಜೈಷ್ ಎ ಮಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು ನಮಗೆ ಹಸ್ತಾಂತರಿಸಲಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸವಾಲು ಹಾಕಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವ್ರು, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮುತ್ಸದ್ಧಿಯೇ ಎಂಬುದು ಉಗ್ರ ಮಸೂದ್ ಅಜರ್ ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಗೊತ್ತಾಗುತ್ತದೆ. ಅವರು ನಿಜಕ್ಕೂ ಮುತ್ಸದ್ಧಿಯಾಗಿದ್ದರೆ ಮಸೂದ್ ಅಜರ್ ನನ್ನು ಹಸ್ತಾಂತರಿಸಲಿ ಎಂದರು.
ಪಾಕಿಸ್ತಾನದಲ್ಲಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ನಿಮ್ಮೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಕಠಿಣ ಸಂದೇಶ ರವಾನಿಸಿದ ಸಚಿವೆ ಸುಷ್ಮಾ ಸ್ವರಾಜ್, ಉಗ್ರರನ್ನು ನಿರ್ನಾಮ ಮಾಡುವಲ್ಲಿ ಪಾಕ್ ಜತೆ ಕೈಜೋಡಿಸಲು ನಾವು ತಯಾರಿದ್ದೇವೆ. ಉಗ್ರತ್ವ ಮತ್ತು ಸಂಧಾನ ಒಟ್ಟಿಗೆ ಹೋಗಲಾರದು ಎಂದು ಹೇಳಿದ್ದಾರೆ.
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ನಾವು ನಿರ್ದಿಷ್ಟವಾಗಿ ಬಾಲಾಕೋಟ್ನಲ್ಲಿದ್ದ ಉಗ್ರರ ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ಮಾಡಿದೆವು. ಆದರೆ, ಪಾಕಿಸ್ತಾನ ಸೇನೆ ಉಗ್ರರ ಪರವಾಗಿ ನಮ್ಮ ಮೇಲೇಕೆ ದಾಳಿ ಮಾಡುತ್ತಿದೆ ಎಂದು ಕೇಳಿದರು. ಅಲ್ಲದೇ ನೀವು ಜೈಷ್ ಸಂಘಟನೆಯನ್ನು ಮಾತ್ರ ನಿಮ್ಮ ನೆಲದಲ್ಲಿ ಇಟ್ಟುಕೊಂಡಿಲ್ಲ. ಬದಲಾಗಿ ಅದಕ್ಕೆ ನೀರೆರೆದು ನೀವೇ ಪೋಷಿಸುತ್ತಿದ್ದೀರಿ, ಉಗ್ರರ ದಾಳಿಯ ಸಂತ್ರಸ್ತ ದೇಶವು ಪ್ರತೀಕಾರಕ್ಕಾಗಿ ದಾಳಿ ಮಾಡಿದಾಗ ನೀವು ಉಗ್ರರ ಪರವಾಗಿ ದಾಳಿ ಮಾಡುತ್ತೀರಿ ಎಂದು ಪಾಕಿಸ್ತಾನ ವಿರುದ್ಧ ಕಿಡಿಕಾರಿದ್ದಾರೆ.
If Imran Khan is So Generous, He Should Give Us Masood Azhar: Says Sushma Swaraj