ಬೆಂಗಳೂರು, ಮಾ.14- ಎಲಿವೇಟೆಡ್ ಕಾರಿಡಾರ್ ಟೆಂಡರ್ ರದ್ದುಮಾಡಬೇಕೆಂದು ಒತ್ತಾಯಿಸಿ ಇದೇ 16ರಂದು ಬೆಳಗ್ಗೆ 10 ಗಂಟೆಗೆ ರೇಸ್ಕೋರ್ಸ್ ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುವುದಾಗಿ ಹಿರಿಯ ರಂಗಕರ್ಮಿ ಪ್ರಕಾಶ್ ಬೆಳವಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಟೆಂಡರ್ನಿಂದ ತೊಂದರೆಯಾಗುವುದೇ ಹೊರತು ಜನರಿಗೆ ಯಾವುದೇ ಉಪಯೋಗವಾಗುವುದಿಲ್ಲ. ಇದನ್ನು ನಿರ್ಮಾಣ ಮಾಡುವುದಕ್ಕೆ 35 ಸಾವಿರ ಕೋಟಿ ವೆಚ್ಚವಾಗುತ್ತದೆ. ಇದರಿಂದ ಯಾವುದೇ ರೀತಿಯ ಅನುಕೂಲವಾಗುವುದಿಲ್ಲ. ಇದು ಕಬ್ಬನ್ಪಾರ್ಕ್ನ ಆಸುಪಾಸಿನಲ್ಲಿ ಹಾದು ಹೋಗುತ್ತದೆ. ಇದರಿಂದ ಪರಿಸರ ಹಾಳಾಗುತ್ತದೆ. ಇದರ ಬದಲು ಇನ್ನೂ ಹೆಚ್ಚು ಹೆಚ್ಚು ಸರ್ಕಾರಿ ಬಸ್ಗಳನ್ನು ಬಿಡಬೇಕೆಂದು ಒತ್ತಾಯಿಸಿದರು.
ಕಾವೇರಿ ನೀರು ತರುವಾಗ ಶೇ.40ರಷ್ಟು ನೀರು ಪೋಲಾಗುತ್ತಿದ್ದು, ಇದನ್ನು ತಡೆಗಟ್ಟಲು ಸ್ಟೀಲ್ಪೈಪ್ಗಳನ್ನು ಅಳವಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದಾಗ ಇದಕ್ಕೆ 20 ಸಾವಿರ ವೆಚ್ಚವಾಗುತ್ತದೆ. ಆದ್ದರಿಂದ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ, ಎಲಿವೇಟೆಡ್ ಕಾರಿಡಾರ್ ಯಾವ ಉಪಯೋಗಕ್ಕೂ ಬರುವುದಿಲ್ಲ. ಇದಕ್ಕೆ 35 ಸಾವಿರ ಕೋಟಿ ವೆಚ್ಚ ಮಾಡಿ ನಿರ್ಮಾಣ ಮಾಡುವುದಕ್ಕೆ ಹೊರಟಿರುವುದು ಯಾವ ರೀತಿ ಸರಿ. ಇದು ಜನಪರ ಸರ್ಕಾರವೇ ಅಥವಾ ಜನವಿರೋಧಿ ಸರ್ಕಾರವೇ ಎಂದು ಚಿಂತಿಸಬೇಕಿದೆ.
ಆದ್ದರಿಂದ ಈ ಟೆಂಡರ್ಅನ್ನು ರದ್ದುಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.