ಬೆಂಗಳೂರು, ಮಾ.14- ಜೆಡಿಎಸ್-ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಪ್ರಕ್ರಿಯೆ ಮುಗಿದಿದ್ದು, ಈಗ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಆರಂಭವಾಗಿದೆ.
ಉತ್ತರ ಕರ್ನಾಟಕ ಭಾಗದ ಹಲವು ಕ್ಷೇತ್ರಗಳಲ್ಲಿ ಪ್ರಭಾವಿ ಗಟಾನುಘಟಿ ನಾಯಕರೇ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಅವರಲ್ಲಿ ಒಮ್ಮತ ಮೂಡಿಸುವುದು ತಲೆನೋವಿನ ವಿಷಯವಾಗಿದೆ.
ಜೆಡಿಎಸ್ಗೆ 8 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿರುವ ಕಾಂಗ್ರೆಸ್ಗೆ ಉಳಿದ 20 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. 20ರಲ್ಲಿ 9ಮಂದಿ ಹಾಲಿ ಸಂಸದರಿರುವ ಕ್ಷೇತ್ರಗಳಿವೆ.
ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದರಿದ್ದರೂ ರಾಜಕೀಯ ಹೊಂದಾಣಿಕೆಯ ಕಾರಣಕ್ಕಾಗಿ ಜೆಡಿಎಸ್ಗೆ ಆ ಕ್ಷೇತ್ರವನ್ನು ಬಿಟ್ಟುಕೊಡಲಾಗಿದೆ.
9 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಆಗಬೇಕಿದೆ. ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಯ ಕೊರತೆ ಇದ್ದರೆ, ಇನ್ನು ಕೆಲವು ಕ್ಷೇತ್ರಗಳಲ್ಲಿ ಐದಾರು ಮಂದಿ ಪ್ರಬಲ ಅಭ್ಯರ್ಥಿಗಳಿದ್ದಾರೆ.
ಬೆಂಗಳೂರು ನಗರದಲ್ಲಿರುವ ಮೂರು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಬೆಂಗಳೂರು ದಕ್ಷಿಣ ಹಾಗೂ ಕೇಂದ್ರ ಕ್ಷೇತ್ರಗಳು ಲಭ್ಯವಾಗಿವೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಖಂಡರು ಹಿಂದೇಟು ಹಾಕುತ್ತಿದ್ದಾರೆ. ಮಾಜಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಶಾಸಕ ಪ್ರಿಯಾಕೃಷ್ಣ ಅವರ ಹೆಸರುಗಳು ಕೇಳಿ ಬಂದಿವೆಯಾದರೂ ಆ ಇಬ್ಬರು ಸ್ಪರ್ಧೆಗೆ ಹೆಚ್ಚಿನ ಒಲವು ತೋರಿಸಿಲ್ಲ.
ಕಳೆದ ಬಾರಿ ಸ್ಪರ್ಧಿಸಿದ್ದ ಉದ್ಯಮಿ ನಂದನ್ ನೀಲೇಕಣಿ ಆಧಾರ್ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಅವರ ಪತ್ನಿ ರೋಹಿಣಿ ನೀಲೇಕಣಿ ಅವರನ್ನು ಕಣಕ್ಕಿಳಿಸುವ ತಯಾರಿಗಳು ನಡೆದಿವೆ.
ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಸುಮಾರು ಒಂದು ಡಜನ್ಗೂ ಹೆಚ್ಚು ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ, ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ರಾಜ್ಯಸಭೆಯ ಮಾಜಿ ಸದಸ್ಯ ಬಿ.ಕೆ.ಹರಿಪ್ರಸಾದ್, ಶಿವಾಜಿನಗರದ ಹಾಲಿ ಶಾಸಕ ರೋಷನ್ ಬೇಗ್, ಕೇಂದ್ರದ ಮಾಜಿ ಸಚಿವ ದಿ.ಜಾಫರ್ ಶರೀಫ್ ಅವರ ಮೊಮ್ಮಗ ರೆಹಮಾನ್ ಶರೀಫ್ ಸೇರಿದಂತೆ ಹಲವಾರು ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲಿ ಗೆಲ್ಲುವ ಅಭ್ಯರ್ಥಿಗಳಿಗಾಗಿ ತೀವ್ರ ಹುಡುಕಾಟ ಆರಂಭವಾಗಿದೆ.
ರಿಜ್ವಾನ್ ಅರ್ಷದ್ ಅವರು ರಾಷ್ಟ್ರ ರಾಜಕಾರಣದತ್ತ ಆಸಕ್ತಿ ತೋರಿಸುತ್ತಿದ್ದು, ತಮಗೇ ಟಿಕೆಟ್ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಬಿ.ಕೆ.ಹರಿಪ್ರಸಾದ್ ಅವರು ಬೆಂಗಳೂರು ಕೇಂದ್ರ ಅಥವಾ ದಕ್ಷಿಣ ಕನ್ನಡ ಎರಡರಲ್ಲಿ ಒಂದು ಕಡೆ ಸ್ಪರ್ಧಿಸಲು ಅವಕಾಶ ಕೊಡುವಂತೆ ಹೈಕಮಾಂಡ್ ಮೇಲೆ ಒತ್ತಡ ಏರುತ್ತಿದ್ದಾರೆ.
ಶಾಸಕ ರೋಷನ್ಬೇಗ್ ಅವರು ತಮ್ಮ ಮಗನನ್ನು ರಾಜಕೀಯಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದು, ತಾವು ಲೋಕಸಭೆಗೆ ಸ್ಪರ್ಧೆ ಮಾಡಿ ಆಯ್ಕೆಯಾದರೆ ತಮ್ಮಿಂದ ತೆರವಾಗುವ ಶಿವಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ಮಗನನ್ನು ಕಣಕ್ಕಿಳಿಸುವ ಉಮೇದಿನಲ್ಲಿದ್ದಾರೆ.
ಬೀದರ್ ಕ್ಷೇತ್ರ ಕಳೆದ ಬಾರಿಯಿಂದ ಕಾಂಗ್ರೆಸ್ ಕೈ ತಪ್ಪಿ ಹೋಗಿದ್ದು, ಅದನ್ನು ಮರುವಶಪಡಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್ ಅವರ ಪುತ್ರ ವಿಜಯ್ಸಿಂಗ್, ಸಿದ್ದರಾಮಯ್ಯ ಅವರ ಆಪ್ತ ಸಿ.ಎಂ.ಇಬ್ರಾಹಿಂ ಈ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕೊಪ್ಪಳ ಕ್ಷೇತ್ರದಲ್ಲಿ ಮಾಜಿ ಸಂಸದ ಬಸವರಾಜರಾಯರೆಡ್ಡಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚಿವೆ.
ಬಸವರಾಜ್ ಹಿಟ್ನಾಳ್, ವಿರೂಪಾಕ್ಷಪ್ಪ ಅವರು ರಾಯರೆಡ್ಡಿ ಅವರ ಜತೆಗೆ ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸವನಗೌಡ ಬಾದರ್ಲಿ ಅವರು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಅದನ್ನು ಈ ಬಾರಿ ಛಿದ್ರ ಮಾಡಲು ಮತ್ತೆ ಮಾಜಿ ಸಚಿವ ವಿನಯ್ಕುಲಕರ್ಣಿ ಅವರನ್ನು ಕಣಕ್ಕಿಳಿಸುವ ಚರ್ಚೆಗಳು ನಡೆದಿವೆ.
ಕಳೆದ ಬಾರಿ ಸಚಿವರಾಗಿದ್ದಾಗ ಸ್ಪರ್ಧಿಸಿದ್ದ ವಿನಯ್ಕುಲಕರ್ಣಿ ಅವರು 1.13ಲಕ್ಷ ಮತಗಳ ಅಂತರದಿಂದ ಸೋಲು ಕಂಡಿದ್ದರು. ಹೀಗಾಗಿ ಮತ್ತೆ ಅವರನ್ನೇ ಕಣಕ್ಕಿಳಿಸುವುದರಿಂದ ಪ್ರಯೋಜನವಿಲ್ಲ ಎಂಬ ಆಕ್ಷೇಪಗಳು ಕೇಳಿ ಬಂದಿವೆ. ಹಿರಿಯ ಕಾಂಗ್ರೆಸಿಗ ಐ.ಜಿ.ಸನದಿ ಅವರ ಪುತ್ರ ಶಾಕೀರ್ ಸನದಿ, ಹಿರಿಯ ಕಾಂಗ್ರೆಸಿಗ ವೀರಣ್ಣ ಮತ್ತೀಕಟ್ಟಿ ಅವರು ಟಿಕೆಟ್ ಕೇಳುತ್ತಿದ್ದಾರೆ.
ಹಾವೇರಿ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋಲುಕಂಡ ಸಲೀಂ ಅಹಮ್ಮದ್ ಈ ಬಾರಿ ಬೆಂಗಳೂರಿನ ಕೇಂದ್ರ ಲೋಕಸಭಾ ಕ್ಷೇತ್ರದತ್ತ ಮುಖ ಮಾಡಿದ್ದಾರೆ.
ಆದರೆ, ಹಾವೇರಿಯ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಲೀಂ ಅಹಮ್ಮದ್ ಅವರ ಹೆಸರಿದೆ. ಮಾಜಿ ಶಾಸಕ ಡಿ.ಆರ್.ಪಾಟೀಲ್, ಬಸವರಾಜ್ ಶಿವಣ್ಣನವರ್ ಅವರ ಹೆಸರುಗಳು ಕೇಳಿ ಬರುತ್ತಿವೆ.
ದಾವಣಗೆರೆ ಜಿಲ್ಲೆಯಲ್ಲಿ ಅಗ್ರಗಣ್ಯ ನಾಯಕರಾಗಿರುವ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಈ ಬಾರಿಯೂ ಟಿಕೆಟ್ ದೊರೆಯುವುದು ಖಚಿತವಾಗಿದೆ. ಅವರ ಕುಟುಂಬದಲ್ಲಿ ಸ್ಪರ್ಧಿಸುವವರು ಯಾರು ಎಂಬ ಚರ್ಚೆಗಳು ನಡೆಯುತ್ತಿವೆ.
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ರಾಜ್ಯ ರಾಜಕಾರಣದಲ್ಲೇ ಹೆಚ್ಚು ಆಸಕ್ತಿ ಹೊಂದಿದ್ದು, ಸಚಿವರಾಗುವ ಆಸೆ ಹೊಂದಿದ್ದಾರೆ. ಹಾಗಾಗಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಲೋಕಸಭೆಗೆ ಸ್ಪರ್ಧಿಸಿ ತಮ್ಮ ಕ್ಷೇತ್ರವನ್ನು ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಬಿಟ್ಟುಕೊಡಲು ಬಯಸಿದ್ದಾರೆ ಎಂದು ಹೇಳಲಾಗಿದೆ.
ಕೊನೆಯ ಕ್ಷಣದವರೆಗೂ ತಂದೆ-ಮಗನಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಚರ್ಚೆ ನಡೆಯುತ್ತಲೇ ಇದೆ.
ಮಂಗಳೂರು ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು ರಮಾನಾಥ್ ರೈ, ಮೊಹಿದ್ದೀನ್ ಭಾವ ಅವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿದೆ. ಐವಾನ್ ಡಿಸೋಜಾ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಜೆಡಿಎಸ್ ಜತೆ ಹಠಕ್ಕೆ ಬಿದ್ದು ಮೈಸೂರು ಕ್ಷೇತ್ರವನ್ನು ಉಳಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರಾಗಿರುವ ಪಿ.ಎಚ್.ವಿಜಯ್ಶಂಕರ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೈಸೂರು ಕ್ಷೇತ್ರಕ್ಕೆ ದೇವರಾಜ ಅರಸು ಅವರ ಮೊಮ್ಮಗ ಹಾಗೂ ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗಡೆ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಸಿದ್ದರಾಮಯ್ಯ ಅವರು ಶಾಸಕರಾಗಿರುವ ಬಾದಾಮಿ ಕ್ಷೇತ್ರವನ್ನೊಳಗೊಂಡ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಎಚ್.ವೈ.ಮೇಟಿ ಅವರ ಪುತ್ರಿ ಬಾಯಕ್ಕಮೇಟಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್, ಹಿರಿಯ ಕಾಂಗ್ರೆಸಿಗ ಅಜಯ್ಕುಮಾರ್ ಸರ್ನಾಯಕ್ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಈಗಾಗಲೇ 2-3 ಸುತ್ತಿನ ಸಭೆ ನಡೆಸಿರುವ ಸಿದ್ದರಾಮಯ್ಯ ಅವರು ಅಂತಿಮವಾಗಿ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಮಾ.16ರಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಅಂದು ಸಂಜೆ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ.