ಜಾಗತಿಕ ಉಗ್ರ ಪಟ್ಟಿಗೆ ಮಸೂದ್​ ಅಜರ್​ ಹೆಸರು ಸೇರಿಸಲು ಚೀನಾ ಅಡ್ಡಗಾಲು; ಅಸಮಾಧಾನ ಹೊರ ಹಾಕಿದ ಭಾರತ

ವಿಶ್ವಸಂಸ್ಥೆ : ಪಾಕಿಸ್ತಾನ ಮೂಲದ ಜೈಷ್​-ಇ-ಮೊಹ್ಮದ್​ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಧಾರಕ್ಕೆ ಚೀನಾ ಮತ್ತೆ ಅಡ್ಡಗಾಲು ಹಾಕಿದೆ.

ಪುಲ್ವಾಮಾ ದಾಳಿಯ ಹೊಣೆಯನ್ನು ಜೈಷ್​ ಹೊತ್ತುಕೊಂಡಿತ್ತು. ಇದಾದ ನಂತರ ಫೆ.27ರಂದು ಭದ್ರತಾ ಸಮಿತಿಯ ಖಾಯಂ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್​, ಇಂಗ್ಲೆಂಡ್​, ಅಮೆರಿಕ ವಿಶ್ವಸಂಸ್ಥೆಯ ಬಳಿ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದ್ದವು. ಆದರೆ ಈ ನಿರ್ಧಾರಕ್ಕೆ ಚೀನಾ ಬೆಂಬಲ ಸೂಚಿಸಿಲ್ಲ. ಈ ಮೂಲಕ ಕಳೆದ 10 ವರ್ಷಗಳ ಅವಧಿಯಲ್ಲಿ ಮಸೂದ್​ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಭಾರತ ಪ್ರಯತ್ನಕ್ಕೆ ಸತತ ನಾಲ್ಕನೇ ಬಾರಿ ಚೀನಾ ಅಡ್ಡಗಾಲು ಹಾಕಿದಂತಾಗಿದೆ.

ಮಸೂದ್​ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರ್ಪಡೆ ಮಾಡಿದರೆ ಆತನಿಗೆ ಒಂದು ದೇಶದಿಂದ ಒಂದು ದೇಶಕ್ಕೆ ಪ್ರಯಾಣ ಬೆಳೆಸಲು ನಿರ್ಬಂಧ ಬೀಳುತ್ತದೆ. ಇದಲ್ಲದೆ, ಸಾಕಷ್ಟು ನಿರ್ಬಂಧ ಆತನ ಮೇಲೆ ಹೇರಲಾಗುತ್ತದೆ. ಈ ಅವಕಾಶಕ್ಕೆ ಚೀನಾ ತಡೆ ನೀಡಿರುವುದಕ್ಕೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಮಸೂದ್​ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಮಸೂದ್​ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ಭಾರತ ಹೇಳಿದೆ.

ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿರುವುದಕ್ಕೆ ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡಿ ಎಂದು ಟ್ವಿಟ್ಟರ್​ನಲ್ಲಿ ಅಭಿಯಾನ ಆರಂಭಗೊಂಡಿದೆ.  ಇತ್ತೀಚೆಗೆ ಪುಲ್ವಾಮಾದಲ್ಲಿ ಉಗ್ರರು ಭಾರತೀಯ ಸೈನಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಈ ವೇಳೆ 40 ಯೋಧರು ಹುತಾತ್ಮರಾಗಿದ್ದರು. ಇದರಿಂದ ಎರಡು ರಾಷ್ಟ್ರಗಳ ನಡುವೆ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ