ಬೆಂಗಳೂರು,ಮಾ.14-ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರಿನ ಮೂರಕ್ಕೆ ಮೂರೂ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ಮುಖಂಡ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ದೇವೇಗೌಡರು ಬೆಂಗಳೂರು ಉತ್ತರದಲ್ಲಿ ಏಕೆ ಸ್ಪರ್ಧಿಸುತ್ತಾರೆ ಎಂಬುದು ಗೊತ್ತಿಲ್ಲ. ಆದರೆ ಮುಖ್ಯಮಂತ್ರಿಗಳ ಬಜೆಟ್ ಹೊಳೆನರಸೀಪುರ ಹಾಸನದ ಬಜೆಟ್ ಆಗಿತ್ತು. ದೇವೇಗೌಡರು ಬೆಂಗಳೂರಿಗೆ ಏನು ಮಾಡಿಲ್ಲ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋದಂತಹ ಯೋಜನೆಗಳನ್ನು ಬೆಂಗಳೂರಿಗೆ ನೀಡಿದೆ. ಹಾಗಾಗಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಭಿಪ್ರಾಯಪಟ್ಟರು.
ಮಂಡ್ಯ ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ಇಲ್ಲಿ ನಿಖಿಲ್ ಸ್ಪರ್ಧಿಸುತ್ತಿರುವುದು ಬೇಸರ ತರಿಸಿದೆ. ಮಂಡ್ಯದಲ್ಲಿ ಜೆಡಿಎಸ್ಗೆ ಒಬ್ಬ ಕಾರ್ಯಕರ್ತ ಸಿಗಲಿಲ್ಲವೆ ಎಂದು ಲೇವಡಿ ಮಾಡಿದರು.
ಮತ್ತೊಂದೆಡೆ ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸುತ್ತಿದ್ದಾರೆ. ಅದು ಜನಗಳ ಅಭಿಪ್ರಾಯ. ಅಂದು ಕಾವೇರಿ ನೀರಿಗಾಗಿ ಅಂಬರೀಶ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ನಾವು ಅವರ ಜೊತೆ ಚರ್ಚೆ ಮಾಡಿದ್ದೇನೆ. ಎಸ್ಎಂ ಕೃಷ್ಣ ಅವರ ಜೊತೆ ಚರ್ಚಿಸುತ್ತೇನೆ. ನಂತರ ಯಾವಾಗ, ಏನು ಎಂದು ಹೇಳುತ್ತೇವೆ ಎಂದರು.
ದೊಡ್ಡ ಮೃಷ್ಟಾನ್ನ ತೋರಿಸಿ ಗಂಜಿಯನ್ನು ಕೊಡಲಿಲ್ಲ ಎಂದು ಮೈತ್ರಿ ಸರ್ಕಾರದ ವಿರುದ್ಧ ಆರ್.ಅಶೋಕ್ ಕಿಡಿಕಾರಿದರು.
ಒಂದೇ ವರ್ಷದಲ್ಲಿ ಎರಡೆರಡು ಬಜೆಟ್ ಮಂಡಿಸಿದರು.ಹೊಳೆನರಸೀಪುರ, ರಾಮನಗರ ಬಿಟ್ಟು, ಬಜೆಟ್ ಯೋಜನೆಗಳು ಬೇರೆ ಕ್ಷೇತ್ರಗಳಿಗೆ ಇರಲಿಲ್ಲ. ಹಾಗಾಗಿ ಸರ್ಕಾರ ನಮ್ಮದು ಅಂತ ಬೇರೆ ಜನರ ಜಿಲ್ಲೆಗಳ ಜನರಿಗೆ ಅನಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇವೇಗೌಡರ ಕುಟುಂಬಕ್ಕೆ ಒಂದು ಬ್ರ್ಯಾಂಡ್ ಇದೆ. ಅವರ ಕುಟುಂಬದವರು ನಿಂತಾಗ ಮಾತ್ರ ಯಾಕೆ ಕಣ್ಣೀರು ಬರುತ್ತೆ ಎಂದು ಪ್ರಶ್ನಿಸಿದ ಅವರು, ಬೇರೆ ಮಣ್ಣಿನ ಮಕ್ಕಳು ನಿಂತಾಗ ಏಕೆ ಕಣ್ಣೀರು ಕೋಡಿ ಹರಿಯುವುದಿಲ್ಲ ಎಂದು ವ್ಯಂಗ್ಯವಾಡಿದರು.
ಮಾಧ್ಯಮಗಳೇ ಭಗವದ್ಗೀತೆ:
ನಮಗೆ ಚುನಾವಣೆ ಮುಗಿಯುವವರೆಗೂ ಪತ್ರಿಕೆ, ಚಾನೆಲ್, ಮಾಧ್ಯಮಗಳೇ ಭಗವದ್ಗೀತೆ, ಬೈಬಲ್. ಮಾಧ್ಯಮಗಳ ಟ್ಯಾಗ್ ಲೈನ್ ರೀತಿಯಲ್ಲಿ ನಾವು ಕೆಲಸ ಮಾಡಬೇಕು. ಚುನಾವಣಾ ಪ್ರಚಾರದಲ್ಲಿ ಟೀಕೆಗಳೇ ಹೆಚ್ಚು. ಅವುಗಳಿಗೆ ಬ್ರಹ್ಮಾಸ್ತ್ರದ ರೀತಿ ಕೆಲಸ ನಿರ್ವಹಿಸಬೇಕಿದೆ.
22 ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು. ನಮ್ಮ ಪ್ರಧಾನಿ ಕರ್ನಾಟಕಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದ್ದಾರೆ. ಹಾಗಾಗಿ ದಕ್ಷಿಣ ಭಾರತದಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಪ್ರಾಶಸ್ಯ ನೀಡಬೇಕಿದೆ ಎಂದರು.
ಅರವಿಂದ ಲಿಂಬಾವಳಿ ಮಾತನಾಡಿ, ನರೇಂದ್ರ ಮೋದಿ ಅವರು ಭಯೋತ್ಪಾದಕರಿಗೆ ಎಂತಹ ಟ್ರೀಟ್ಮೆಂಟ್ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಕಾಶ್ಮೀರದ ಹಜರತ್ಬಾಲ್ ದರ್ಗಾದಲ್ಲಿ ಉಗ್ರಗಾಮಿಗಳು ಅಡಗಿಕೊಂಡಿದ್ದಾಗ ಅಂದಿನ ಯುಪಿಎ ಸರ್ಕಾರ ಅವರಿಗೆ ಬಿರಿಯಾನಿ ಕಳುಹಿಸಿತ್ತು. ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಿಗೆ ಗನ್ಮ್ಯಾನ್ಗಳ ರಕ್ಷಣೆ ಒದಗಿಸಿತ್ತು ಎಂದು ಆರೋಪಿಸಿದರು.
ಸ್ಮಾರ್ಟ್ ಸಿಟಿ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೆ ಬೆಂಗಳೂರು-ಮಂಗಳೂರಿಗೆ ಬಂದ ಈ ಹಣವನ್ನು ರಾಜ್ಯ ಸರ್ಕಾರ ಬೇರೆ ಕೆಲಸಕ್ಕೆ ನೀಡಿದೆ ಎಂದು ಆಕ್ಷೇಪಿಸಿದರು.
ನಿರ್ಭಯ ಯೋಜನೆಯಡಿ ಬೆಂಗಳೂರಿನೆಲ್ಲೆಡೆ ಸಿಸಿಟಿವಿ ಅಳವಡಿಕೆಗೆ 940 ಕೋಟಿ ಬಿಡುಗಡೆ ಮಾಡಿದ್ದರು. ಬೆಂಗಳೂರಿನ ಎಲ್ಲೂ ಸಿಸಿಟಿವಿ ಕಾಣಿಸುತ್ತಿಲ್ಲ ಎಂದು ಕಿಡಿಕಾರಿದರು.
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗರನ್ನು ದೇಶದಿಂದ ಹೊರಹಾಕಲು ಕೇಂದ್ರ ಸರ್ಕಾರ ಆದೇಶಿಸಿದರೂ ರಾಜ್ಯ ಸರ್ಕಾರ ಅಕ್ರಮ ಬಾಂಗ್ಲಾ ವಲಸಿಗರಿಗೆ ಚುನಾವಣಾ ಗುರುತಿನ ಚೀಟಿ ಕೊಟ್ಟು ಅವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿದೆ ಎಂದರು.