ಬೆಂಗಳೂರು,ಮಾ.13-ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನ ಅತಿಯಾದ ಆತ್ಮವಿಶ್ವಾಸ ಹಾಗೂ ರಣೋತ್ಸಾಹದಲ್ಲಿದ್ದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‍ನಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ನಾಯಕರು ಹೈರಾಣರಾಗಿದ್ದಾರೆ. ಹೀಗಾಗಿ ಚುನಾವಣಾ ಕಾವು ಈವರೆಗೂ ರಂಗೇರದಿರುವುದು ಅಭ್ಯರ್ಥಿಗಳಲ್ಲೂ ನಿರುತ್ಸಾಹ ಉಂಟು ಮಾಡಿದೆ.
ರಾಜ್ಯದಲ್ಲಿ ಬಿಜೆಪಿಯ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕಬೇಕೆಂದು ಯತ್ನಿಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಕಳೆದ ಮೂರು ದಿನಗಳಿಂದ ಸೀಟು ಹಂಚಿಕೆ ಸಂಬಂಧ ನಡೆಸುತ್ತಿರುವ ಕಸರತ್ತು ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ.
ಮೂರು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿರುವ ಕಾಂಗ್ರೆಸ್ ನಾಯಕರಲ್ಲಿ ತನ್ನ ಮಿತ್ರ ಪಕ್ಷ ಜೆಡಿಎಸ್‍ಗೆ ಎಷ್ಟು ಕ್ಷೇತ್ರ, ಯಾವ್ಯಾವ ಕ್ಷೇತ್ರಗಳನ್ನು ಬಿಟ್ಟು ಕೊಡಬೇಕು ಎಂಬ ಬಗ್ಗೆ ಪರಸ್ಪರ ಹೊಂದಾಣಿಕೆ ಏರ್ಪಡುತ್ತಿಲ್ಲ.
ಎತ್ತು ಏರಿಗೆ, ಕೋಣ ನೀರಿಗೆ ಎಂಬಂತೆ ಹಾಲಿ ಸಂಸದರ ಕ್ಷೇತ್ರಗಳನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂಬುದು ಕಾಂಗ್ರೆಸ್ ವಾದ. ಆದರೆ ಕಾಂಗ್ರೆಸ್ ಕೋಟೆಯಲ್ಲೇ ಗೆಲುವಿನ ನಗೆ ಬೀರಬೇಕೆಂದು ಹಠಕ್ಕೆ ಬಿದ್ದಿರುವ ಜೆಡಿಎಸ್ ಎಷ್ಟು ಸಾಧ್ಯವೋ ಅಷ್ಟನ್ನು ಗಿಟ್ಟಿಸಿಕೊಳ್ಳಲು ಹವಣಿಸುತ್ತಿದೆ.
ಅಸ್ಥಿತ್ವದ ಪ್ರಶ್ನೆ:
ಈ ಲೋಕಸಭೆ ಚುನಾವಣೆ ರಾಜಕೀಯ ಪಕ್ಷಗಳಿಗೆ ಅತ್ಯಂತ ಮಹತ್ವದ್ದಾಗಿರುವುದರಿಂದ ಒಂದೊಂದು ಕ್ಷೇತ್ರವನ್ನು ಬಿಟ್ಟುಕೊಡಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ. ತಾನು ಗೆದ್ದಿರುವ 10 ಲೋಕಸಭಾ ಕ್ಷೇತ್ರಗಳಲ್ಲಿ ಒಂದೇ ಒಂದೂ ಕ್ಷೇತ್ರವನ್ನು ಬಿಟ್ಟುಕೊಡಬಾರದೆಂಬ ತೀರ್ಮಾನಕ್ಕೆ ಬಂದಿರುವುದರಿಂದ ಸೀಟು ಹಂಚಿಕೆ ಎರಡು ಪಕ್ಷಗಳಲ್ಲಿ ತಲೆನೋವಾಗಿ ಪರಿಣಮಿಸಿದೆ.
ಯಾವಾಗಲೂ ರಾಜಕೀಯ ದಾಳವನ್ನು ಉರುಳಿಸುವಲ್ಲಿ ಇತರರಿಗಿಂತಲೂ ಒಂದು ಕೈ ಮುಂದಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹಾಕಿರುವ ದಾಳಕ್ಕೆ ಕಾಂಗ್ರೆಸ್ ಲೆಕ್ಕಾಚಾರವೇ ಬುಡಮೇಲಾಗಿದೆ.
ತಮಗೆ 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಟ 12ರಿಂದ 10 ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದೆ ಬೇಡಿಕೆ ಮುಂದಿಟ್ಟಿದ್ದಾರೆ.
ಗೌಡರು ಕೇಳಿರುವ ಕ್ಷೇತ್ರಗಳಲ್ಲಿ ಮೈಸೂರು-ಕೊಡುಗು, ಕೋಲಾರ, ತುಮಕೂರು, ಬೆಂಗಳೂರು ಉತ್ತರ, ರಾಯಚೂರು, ಚಿತ್ರದುರ್ಗ ಮತ್ತು ಬೀದರ್ ಕ್ಷೇತ್ರಗಳನ್ನು ತೆನೆಹೊತ್ತ ಮಹಿಳೆಗೆ ನೀಡಬೇಕೆಂಬುದು ಅವರ ಮೊದಲ ಬೇಡಿಕೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ತನ್ನನ್ನು ಸೋಲಿಸಿದ್ದಲ್ಲದೆ ಮೈಸೂರು ಜಿಲ್ಲೆಯಿಂದ ತಮ್ಮನ್ನು ಶಾಶ್ವತವಾಗಿ ಮೂಲೆ ಗುಂಪು ಮಾಡಬಹುದೆಂಬ ಅಳುಕು ಸಿದ್ದರಾಮಯ್ಯನವರಿಗೆ ಎದುರಾಗಿದೆ.
ಹೀಗಾಗಿ ಸಿದ್ದರಾಮಯ್ಯ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮೈಸೂರು-ಕೊಡಗು ಕಾಂಗ್ರೆಸ್‍ನಲ್ಲೇ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಈಗಾಗಲೇ ದೇವೇಗೌಡರು ಮಂಡ್ಯದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್, ಹಾಸನದಿಂದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ.
ಈಗ ದೇವೇಗೌಡರು ಬೆಂಗಳೂರು ಉತ್ತರ, ಮೈಸೂರು-ಕೊಡಗು, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಸಮಸ್ಯೆಯ ಮೂಲ ಇರುವುದು ಇಲ್ಲೇ.
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಎಂ.ವೀರಪ್ಪ ಮೊಯ್ಲಿ ಸಂಸದರಾಗಿದ್ದಾರೆ, ತುಮಕೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಪರಮಾಪ್ತ ಮುದ್ದಹನುಮೇಗೌಡ ತಮಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ದೇವೆಗೌಡರು ಹಾಸನದಿಂದ ಮೈಸೂರಿಗೆ ವಲಸೆ ಬಂದರೆ ರಾಜಕೀಯದಲ್ಲಿ ತಾವಿನ್ನು ಶಾಶ್ವತವಾಗಿ ಮೂಲೆ ಗುಂಪಾಗಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಸಿದ್ಧರಾಮಯ್ಯ ತಮ್ಮ ತವರು ಜಿಲ್ಲೆಯನ್ನು ಬಿಟ್ಟುಕೊಡಲು ಸುತಾರಾಮ್ ಒಪ್ಪುತ್ತಿಲ್ಲ.
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಎದುರು ಚಿತ್ರನಟ ದಿವಂಗತ ಅಂಬರೀಶ್ ಪತ್ನಿ ಸುಮಲತಾ ಕಣಕ್ಕಿಳಿಯಲು ಮುಂದಾಗಿರುವುದು ರಾಜಕೀಯ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಿದೆ.
ಬಿಜೆಪಿಯಲ್ಲೂ ಇದೇ ಕಥೆ:
ಮಿಷನ್-22 ಗುರಿಯೊಂದಿಗೆ ಲೋಕಸಭೆ ಚುನಾವಣೆಗೆ ಧುಮುಕಿರುವ ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಹಾಲಿ ಸಂಸದರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದಲ್ಲಿ ಅಪಸ್ವರ ಎದ್ದಿದೆ.
ಚಿಕ್ಕಮಗಳೂರು ಉಡುಪಿ ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು ಎಂದು ಸ್ವಪಕ್ಷೀಯರೇ ವರಿಷ್ಠರಿಗೆ ದೂರು ನೀಡಿದ್ದಾರೆ.
ಗೋ ಬ್ಯಾಕ್ ಶೋಭಾ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಲಾಗಿದ್ದು, ಇದಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು-ಕೊಡಗು, ಬೆಳಗಾವಿ, ಕೊಪ್ಪಳ , ವಿಜಾಪುರ ಸಂಸದರಿಗೆ ಟಿಕೆಟ್ ನೀಡಿದರೆ ಫಲಿತಾಂಶದಲ್ಲಿ ಏರುಪೇರಾಗಬಹುದೆಂಬ ಆತಂಕವನ್ನು ಪಕ್ಷದವರೇ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಮುಖಂಡರ ಜೊತೆ ಸರಣಿ ಸಭೆಗಳನ್ನು ನಡೆಸಿದರೂ ಯಾವುದೇ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.
ಹೀಗೆ ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಗೊಂದಲ ಮುಂದುವರೆದಿರುವುದರಿಂದ ಆಕಾಂಕ್ಷಿಗಳು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.