ಬೆಂಗಳೂರು,ಮಾ.13- ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ನಡುವೆಯೇ ಕುರುಡು ಕಾಂಚಾಣದ ಕೈವಾಡ ಜೋರಾಗಿ ಕಂಡುಬರುತ್ತಿದೆ.
ಇಂದು ರಾಜ್ಯದಲ್ಲಿ ಎರಡು ಪ್ರತ್ಯೇಕ ಕಡೆಗಳಲ್ಲಿ ದಾಖಲೆ ಇಲ್ಲದ ಹಣ ಕೊಂಡೊಯ್ಯುತ್ತಿರುವ ಬಗ್ಗೆ ಪೊಲೀಸರು ತಪಾಸಣೆ ನಡೆಸಿದ್ದು, ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಾಳ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಜೀಪಿನಲ್ಲಿ ಸಾಗಿಸುತ್ತಿದ್ದ 1.50 ಲಕ್ಷ ರೂ.ಗಳನ್ನು ತಹಸೀಲ್ದಾರ್ ನಿನ್ನೆ ರಾತ್ರಿ ವಶಕ್ಕೆ ಪಡೆದಿದ್ದಾರೆ.
ಸೈಯದ್ಮೊಹಿದ್ದೀನ್ ಹಾಗೂ ಬಾಲಕೃಷ್ಣ ಅವರಿಗೆ ಸೇರಿದ ಹಣ ಇದೆಂದು ಹೇಳಲಾಗಿದ್ದು, ಯಾವ ಉದ್ದೇಶಕ್ಕೆ ಹಣ ಸಾಗಿಸಲಾಗುತ್ತಿತ್ತು ಎಂಬುದು ತಿಳಿದುಬಂದಿಲ್ಲ. ಹಣದ ದಾಖಲಾತಿಯನ್ನು ನೀಡಿಲ್ಲ.
ಮತ್ತೊಂದು ಪ್ರಕರಣದಲ್ಲಿ ಹಾಸನದ ಅರಸೀಕೆರೆಯ ಮೈಲನಹಳ್ಳಿ ಗೇಟ್ ಬಳಿಯ ತಿಪಟೂರು ಚೆಕ್ಪೋಸ್ಟ್ನಲ್ಲಿ ಜಿಲ್ಲಾಧಿಕಾರಿ ಅಕ್ರಮ್ ಪಾಷ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ ನೇತೃತ್ವದ ತಂಡ ರಾತ್ರಿ ಖಚಿತ ಮಾಹಿತಿ ಮೇರೆಗೆ ಕಾರಿನಲ್ಲಿ ಸಾಗಿಸುತ್ತಿದ್ದ 3.10 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಎಸ್ಐಟಿ ತಂಡ ತಪಾಸಣೆ ನಡೆಸಿದಾಗ ಶಿವಮೊಗ್ಗದ ಬಬ್ಬಳ್ಳಿ ಗ್ರಾಮದ ಗುತ್ತಿಗೆದಾರರಾದ ರಂಗನಾಥ್ಗಿರಿ ಕಾರಿನಲ್ಲಿ ಸೂಕ್ತ ದಾಖಲೆಗಳಿಲ್ಲದ ಹಣ ಸಾಗಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಹಣದ ಬಗ್ಗೆ ದಾಖಲೆ ಒದಗಿಸಿಲ್ಲ.
ಒಟ್ಟಾರೆ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಕುರುಡು ಕಾಂಚಾಣದ ಆಟ ಆರಂಭವಾಗಿದ್ದು, ದಾಖಲೆ ಇಲ್ಲದ ಹಣ ಪತ್ತೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ.