ಬೆಂಗಳೂರು, ಮಾ.13- ಬೆಂಗಳೂರು ನಗರ ಪೊಲೀಸರ ರಿವಾಲ್ವಾರ್‍ಗಳು ಈಗ ಪ್ರತಿದಿನ ಸದ್ದು ಮಾಡುತ್ತಿದ್ದು, ರೌಡಿ ಲಕ್ಷ್ಮಣನ ಕೊಲೆ ಪ್ರಕರಣದ ಇನ್ನೊಬ್ಬ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ.
ಸೋಲದೇವನಹಳ್ಳಿ ನಿವಾಸಿ ಆಕಾಶ್ ಅಲಿಯಾಸ್ ಮಳೆರಾಯ (24) ಸಿಸಿಬಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಕೊಲೆ ಆರೋಪಿ.
ಈಗಾಗಲೇ ಲಕ್ಷ್ಮಣ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳು ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾರೆ.
ಆಕಾಶ್ ವಿರುದ್ಧ ಚನ್ನಪಟ್ಟಣ, ಸೋಲದೇವನಹಳ್ಳಿ ಮುಂತಾದ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಸಿಸಿಬಿಯ ಡಿಸಿಪಿ ಗಿರೀಶ್ ಈ ಸಂಜೆಗೆ ತಿಳಿಸಿದ್ದಾರೆ.
ಇಂದು ಮುಂಜಾನೆ 5 ಗಂಟೆ ಸಮಯದಲ್ಲಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಉತ್ತರಹಳ್ಳಿಯ ಪೂರ್ಣಪ್ರಜ್ಞ ನಗರದ ನಿರ್ಜನ ಪ್ರದೇಶದ ಬಳಿ ಆಕಾಶ್ ಇರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಇನ್ಸ್‍ಪೆಕ್ಟರ್ ಮುರುಗೇಂದ್ರಯ್ಯ, ಹೆಡ್‍ಕಾನ್‍ಸ್ಟೆಬಲ್ ಅರುಣ್ ಮತ್ತು ಸಿಬ್ಬಂದಿಗಳಾದ ಶಾಂತರಾಜು, ಸತೀಶ್ ಅವರನ್ನೊಳಗೊಂಡ ತಂಡ ಅಲ್ಲಿಗೆ ತೆರಳಿದೆ.
ಆಗ ಹಿಡಿಯಲು ಮುಂದಾದ ಹೆಡ್‍ಕಾನ್ಸ್‍ಟೆಬಲ್ ಅರುಣ್ ಅವರ ಮುಖಕ್ಕೆ ಆರೋಪಿ ಪೆಪ್ಪರ್ ಸ್ಪ್ರೇ ಮಾಡಿ ಹಲ್ಲೆಗೆ ಮುಂದಾಗಿದ್ದಾನೆ.
ತಕ್ಷಣ ಇನ್‍ಸ್ಪೆಕ್ಟರ್ ಮುರುಗೇಂದ್ರಯ್ಯ ಅವರು ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಲೆಕ್ಕಿಸದೆ ಆರೋಪಿ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಇನ್‍ಸ್ಪೆಕ್ಟರ್ ಹಾರಿಸಿದ ಗುಂಡು ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.
ಈ ವೇಳೆ ಪೊಲೀಸರು ಸುತ್ತುವರಿದು ಆರೋಪಿ ಆಕಾಶ್‍ನನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತೆಗೆ ದಾಖಲಿಸಿದ್ದಾರೆ.
ಲಕ್ಷ್ಮಣ್ ಹತ್ಯೆ ಪ್ರಕರಣದ ಆರೋಪಿಗಳಾದ ಕ್ಯಾಟ್‍ರಾಜ ಮತ್ತು ಹೇಮಿ ಈಗಾಗಲೇ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾರೆ.
ಒಟ್ಟಾರೆ ಈ ಪ್ರಕರಣದಲ್ಲಿ ಇದುವರೆಗೆ ಯುವತಿ ಸೇರಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಗಿರೀಶ್ ಅವರು ತಿಳಿಸಿದ್ದಾರೆ.