ಮಸೂದ್ ಅಜರ್ ಜಾಗತಿಕ ಭಯೋತ್ಪಾದಕ; ಪ್ರಾದೇಶಿಕ ಸ್ಥಿರತೆ, ಶಾಂತಿಗೆ ಮಾರಕ: ಅಮೆರಿಕ

ವಾಷಿಂಗ್ಟನ್‌: ಜೈಷೆ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ ಜಾಗತಿಕ ಭಯೋತ್ಪಾದಕ ಎಂಬ ಹಣೆಪಟ್ಟಿಗೆ ಅರ್ಹವಾಗಿದ್ದು, ಪ್ರಾದೇಶಿಕ ಸ್ಥಿರತೆ ಹಾಗೂ ಶಾಂತಿಗೆ ಅಪಾಯಕಾರಿ ಯಾಗಿದ್ದಾನೆ ಎಂದು ಅಮೆರಿಕ ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾವದ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಬೇಕಿದೆ.

ಜೈಷೆ ಮುಖ್ಯಸ್ಥ 50 ವರ್ಷ ವಯಸ್ಸಿನ ಅಜರ್‌, ಭಾರತದಲ್ಲಿ ಹಲವು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದಾನೆ. ಸಂಸತ್‌ ಮೇಲಿನ ದಾಳಿ, ಪಠಾಣ್‌ಕೋಟ್‌ ವಾಯುನೆಲೆ ಮೇಲಿನ ಉಗ್ರ ದಾಳಿ, ಜಮ್ಮು ಮತ್ತು ಉರಿ ಸೇನಾ ನೆಲೆಗಳ ಮೇಲಿನ ದಾಳಿ ಹಾಗೂ ಫೆಬ್ರವರಿ 14ರಂದು ನಡೆದ ಪುಲ್ವಾಮಾ ಉಗ್ರ ದಾಳಿಗಳಿಗೆ ಈತನೇ ಹೊಣೆಯಾಗಿದ್ದಾನೆ.

ಪುಲ್ವಾಮಾ ದಾಳಿ ಬಳಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮೂರು ಕಾಯಂ ಸದಸ್ಯರಾದ ಅಮೆರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸಬೇಕೆಂಬ ಪ್ರಸ್ತಾಪವನ್ನು ಮತ್ತೊಮ್ಮೆ ಮುಂದಿಟ್ಟಿವೆ.

ಈ ಮೂರು ದೇಶಗಳು ಈ ಹಿಂದೆಯೂ ಸಾಕಷ್ಟು ಪ್ರಯತ್ನಪಟ್ಟಿದ್ದವು. ಆದರೆ ಚೀನಾದ ತಡೆಯಿಂದಾಗಿ ಅಜರ್‌ಗೆ ಜಾಗತಿಕ ಉಗ್ರನೆಂಬ ಹಣೆಪಟ್ಟಿ ಘೋಷಣೆ ಸಾಧ್ಯವಾಗಿಲ್ಲ.

ಭದ್ರತಾ ಮಂಡಳಿಯ ಐದು ವೀಟೋ ರಾಷ್ಟ್ರಗಳ ಪೈಕಿ ಚೀನಾವೂ ಒಂದು. ಪ್ರತಿಬಾರಿ ಅಜರ್‌ ವಿರುದ್ಧ ಪ್ರಸ್ತಾವ ಮಂಡನೆಯಾದಾಗೆಲ್ಲ ಚೀನಾ ವೀಟೋ ಚಲಾಯಿಸಿ ನಿರ್ಣಯವನ್ನು ಹಾಳುಗೆಡವುತ್ತಿದೆ.

ಭದ್ರತಾ ಮಂಡಳಿ ಸಭೆ ಇಂದು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅಮೆರಿಕದ ಟ್ರಂಪ್‌ ಆಡಳಿತ ಮಂಗಳವಾರವೇ, ಅಜರ್ ವಿರುದ್ಧದ ನಿರ್ಣಯಕ್ಕೆ ಸಾಕಷ್ಟು ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದೆ.

‘ಅಜರ್‌ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕ ಹಾಗೂ ಮುಖ್ಯಸ್ಥ. ವಿಶ್ವಸಂಸ್ಥೆಯ ನಿಯಮಾನುಸಾರ ಜಾಗತಿಕ ಭಯೋತ್ಪಾದಕನೆಂಬ ಹಣೆಪಟ್ಟಿಗೆ ಈತ ಎಲ್ಲ ದೃಷ್ಟಿಯಿಂದಲೂ ಅರ್ಹನಾಗಿದ್ದಾನೆ’ ಎಂದು ವಿದೇಶಾಂಗ ಇಲಾಖೆ ಉಪ ವಕ್ತಾರ ರಾಬರ್ಟ್‌ ಪಲ್ಲಾಡಿನೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ