ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡುವ ಮೂಲಕ ಆತನ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜುಗೊಳಿಸಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಮಗನ ಬಗ್ಗೆ ಆತಂಕ ಶುರುವಾದಂತಿದೆ. ಇದೇ ಕಾರಣಕ್ಕೆ ಅವರು ಜ್ಯೋತಿಷಿ ರಾಜಗುರು ದ್ವಾರಕಾನಾಥ್ ಅವರ ಮನೆಗೆ ನಿನ್ನೆ ರಾತ್ರೋರಾತ್ರಿ ದೌಡಾಯಿಸಿ ಚರ್ಚೆ ಮಾಡಿದ್ದಾರೆ.
ಸಿಎಂ ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ಅವರು ಜ್ಯೋತಿಷ್ಯವನ್ನು ಬಹಳ ನಂಬುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೇ ಕಾರಣಕ್ಕೆ ಡಿಕೆ ಶಿವಕುಮಾರ್ ಅವರ ಆಪ್ತರಾಗಿರುವ ರಾಜಗುರು ದ್ವಾರಕಾನಾಥ್ ಅವರ ಮನೆಗೆ ನಿನ್ನೆ ರಾತ್ರಿ ತಮ್ಮೊಂದಿಗೆ ಮಗ ನಿಖಿಲ್ ಅವರನ್ನೂ ಕರೆದುಕೊಂಡು ಹೋಗಿರುವ ಸಿಎಂ ಕುಮಾರಸ್ವಾಮಿ, ದ್ವಾರಕಾನಾಥ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ತಮ್ಮ ಮಗನ ರಾಜಕೀಯ ಭವಿಷ್ಯ ಏನಾಗಲಿದೆ ಎಂದು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿಖಿಲ್ ಮಂಡ್ಯದಿಂದ ಸ್ಪರ್ಧೆಗಿಳಿದರೆ ಏನಾಗಬಹುದು? ಮುಂದೆ ರಾಜಕೀಯ ಭವಿಷ್ಯ ಹೇಗಿದೆ? ಎಂಬ ಬಗ್ಗೆ ತಿಳಿದುಕೊಳ್ಳಲು ಜ್ಯೋತಿಷ್ಯದ ಮೊರೆ ಹೋದ ಕುಮಾರಸ್ವಾಮಿ ಅವರು ರಾಜಗುರು ದ್ವಾರಕಾನಾಥ್ ಅವರೊಂದಿಗೆ ಗೌಪ್ಯ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕುಮಾರಸ್ವಾಮಿ ಅವರು ಕಳೆದ ವಾರವೇ ಬರಬೇಕಾಗಿತ್ತು. ಅವರು ಶೃಂಗೇರಿಗೆ ಹೋಗಿದ್ದರಿಂದ ಬರಲು ಆಗಿರಲಿಲ್ಲ. ವಂಶ ಪಾರಂಪರ್ಯ ರಾಜಕಾರಣ ಒಂದು ಕಡೆ ಇರಲಿ, ಯಾರ್ ಯಾರಿಗೆ ಯೋಗ ಇರುತ್ತೊ ಅವರು ಅನುಭವಿಸುತ್ತಾರೆ. ಆ ಹುಡುಗ ಚುನಾವಣೆಗೆ ನಿಲ್ಲಬೇಕು ಎಂಬ ಉತ್ಸಾಹದಲ್ಲಿದ್ದಾನೆ. ಒಬ್ಬ ಗುರುವಾಗಿ ನಮ್ಮ ಮನೆಗೆ ಯಾರೇ ಬಂದರೂ ಧೈರ್ಯ ತುಂಬಿ ಕಳಿಸುತ್ತೇನೆ, ಅದು ನನ್ನ ಕರ್ತವ್ಯ. ನಿನಗೆ, ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದೇನೆ, ಅವರಿಗೆ ಶಾರದಾ ಪೀಠದ ಪೂರ್ಣಾನುಗ್ರಹ ಇದೆ. ಕುಮಾರಸ್ವಾಮಿ ಅವರಿಗೆ ಕಂಟಕ ಬಂದಾಗ ಗಾಣಕಪುರಕ್ಕೆ ಹೋಗಿ ಸೇವೆ ಮಾಡಿ ಎಂದು ಹೇಳಿದೆ.ಅಲ್ಲಿ ಹೋಗಿ ಪೂಜೆ ಮಾಡಿಕೊಂಡು ಬಂದಿದ್ದಾರೆ. ಈಗ ಅವರಿಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದೇನೆ ಎಂದು ದ್ವಾರಕನಾಥ್ ಗುರೂಜಿ ಹೇಳಿದ್ದಾರೆ.
ಈ ಬಾರಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ ಎಂದು ಭವಿಷ್ಯ ನುಡಿದ ರಾಜಗುರು ದ್ವಾರಕನಾಥ್ ಗುರೂಜಿ, ಈಗ ನಮ್ಮ ರಾಷ್ಟ್ರದಲ್ಲಿ ಮೋದಿ ಅವರನ್ನು ಸವಾಲಾಗಿ ಸ್ವೀಕರಿಸುವಂಥವರು ಯಾರೂ ಇಲ್ಲ. ಮೋದಿಗೆ ಸವಾಲು ಹಾಕೋರು ಇಲ್ಲದ ಕಾರಣ ಮೋದಿ ಗೆದ್ದೇ ಗೆಲ್ಲುತ್ತಾರೆ. ರಾಷ್ಟ್ರ ಮಟ್ಟದ ಸರ್ಕಾರ ರಚನೆ ಮಾಡೇ ಮಾಡುತ್ತಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಬರಲು ಇನ್ನೂ ಸಮಯ ಬೇಕು ಎಂದಿದ್ದಾರೆ.