ಮಾ.16ರಂದು ಕಾಂಗ್ರೇಸ್ ಅಭ್ಯರ್ಥಿಗಳ ಆಯ್ಕೆ-ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು,ಮಾ.13- ದೆಹಲಿಯಲ್ಲಿ ಮಾ.16ರಂದು ನಡೆಯುವ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜೊತೆಗಿನ ಮೈತ್ರಿ ಸಂಬಂಧಪಟ್ಟಂತೆ ಬಹುತೇಕ ಎಲ್ಲ ಪ್ರಕ್ರಿಯೆಗಳು ಮುಗಿದಿವೆ. ಒಂದೆರಡು ಕ್ಷೇತ್ರಗಳ ಹಂಚಿಕೆ ವಿಷಯದಲ್ಲಿ ಮಾತುಕತೆ ನಡೆಯುತ್ತಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಯಲ್ಲಿ ಯಾವುದೇ ಗೊಂದಲ ಇಲ್ಲ. ನಾವು ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಅಂಬರೀಶ್ ನಮ್ಮ ಪಕ್ಷದ ದೊಡ್ಡ ನಾಯಕರು. ಅವರ ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ರಾಜಕೀಯಕ್ಕೆ ಬರುವುದಾದರೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಈ ಮೊದಲೇ ಹೇಳಿದ್ದೇವೆ. ಅದಕ್ಕೆ ಬದ್ಧರಾಗಿದ್ದೇವೆ. ಆದರೆ ಈ ಸಂದರ್ಭದಲ್ಲಿ ಆ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ ಎಂದರು.

ಜೆಡಿಎಸ್-ಕಾಂಗ್ರೆಸ್ ನಡುವಿನ ಮೈತ್ರಿಯಿಂದಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕಾಗಿದೆ. ಹಾಲಿ ಸಂಸದರಿರುವ ಕ್ಷೇತ್ರಗಳು, ಆಯಾ ಪಕ್ಷಗಳಿಗೆ ಸೇರುತ್ತವೆ. ಹೀಗಾಗಿ ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಿದರೆ ಕಾಂಗ್ರೆಸ್ ಬೆಂಬಲ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅವರ ರಾಜಕೀಯ ಭವಿಷ್ಯಕ್ಕೆ ಬೆಂಬಲ ನೀಡಲು ಸಿದ್ಧ ಎಂದು ಹೇಳಿದರು.

ಮಂಡ್ಯದಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರು ಜೆಡಿಎಸ್ ಅಭ್ಯರ್ಥಿಯನ್ನು ವಿರೋಧ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ 8 ತಿಂಗಳಿನಿಂದಲೂ ಮಂಡ್ಯದಲ್ಲಿ ಸ್ಥಳೀಯ ನಾಯಕರ ನಡುವೆ ಹೊಂದಾಣಿಕೆಯಾಗಿಲ್ಲ. ರಾಜ್ಯಮಟ್ಟದಲ್ಲಿ ನಾವು ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿದ್ದೇವೆ. ನಮ್ಮ ಮಧ್ಯೆ ಯಾವುದೇ ಗೊಂದಲಗಳಿಲ್ಲ. ಆದರೆ ಮಂಡ್ಯ ಜಿಲ್ಲೆಯಲ್ಲಿ ಎರಡು ಪಕ್ಷಗಳ ಸ್ಥಳೀಯ ನಾಯಕರ ನಡುವೆ ಒಗ್ಗಟ್ಟಿನ ಕೊರತೆ ಇದೆ. ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷದವರು ಒಟ್ಟಾಗಿ ಪ್ರಚಾರ ಕೈಗೊಂಡು ಒಮ್ಮತ ಮೂಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಇತ್ತೀಚೆಗೆ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಕುರಿತು ಒಳ್ಳೆಯ ರೀತಿ ಚರ್ಚೆ ನಡೆಸಿದೆ.

ತುಮಕೂರು , ಮೈಸೂರು ಸೇರಿದಂತೆ ಜೆಡಿಎಸ್ ಹಲವು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಹೊಂದಾಣಿಕೆ ವಿಷಯದಲ್ಲಿ ಬಹುತೇಕ ತೀರ್ಮಾನಗಳಾಗಿವೆ. ಆದರೆ ಎಷ್ಟು ಸ್ಥಾನಗಳು ಎಂದು ನಾನು ಹೇಳಲು ಈ ಹಂತದಲ್ಲಿ ಸಾಧ್ಯವಿಲ್ಲ.

ತುಮಕೂರು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುವ ಸಾಧ್ಯತೆ ಆಧರಿಸಿ ಸೀಟು ಹಂಚಿಕೆ ಮಾಡಲಾಗುವುದು. ಮೈಸೂರಿನಲ್ಲಿ ಐತಿಹಾಸಿಕವಾಗಿ ನೋಡುವುದಾದರೆ ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಈಗಲೂ ಕಾಂಗ್ರೆಸ್ ಅಲ್ಲಿ ಸ್ಪರ್ಧಿಸಿ ಗೆಲ್ಲಲಿದೆ ಎಂಬುದು ನಮ್ಮ ಅಭಿಪ್ರಾಯ. ಆದರೆ ಚರ್ಚೆ ನಡೆಯುತ್ತಿದೆ. ಶೀಘ್ರವೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಬೆಳಗಾವಿ ಅಭ್ಯರ್ಥಿಗಳ ಆಯ್ಕೆ ಸಂಬಂಧಪಟ್ಟಂತೆ ಇಂದು ಸಂಜೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾವು ಚರ್ಚೆ ನಡೆಸುತ್ತೇವೆ. ನಂತರ ಸತೀಶ್ ಜಾರಕಿಹೊಳಿ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ