ತುಮಕೂರು, ಮಾ.13- ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಾಗಲಿದೆಯೋ ಅಥವಾ ಜೆಡಿಎಸ್ ಅಭ್ಯರ್ಥಿ ಇಲ್ಲಿ ಕಣಕ್ಕಿಳಿಯುವರೇ ಎಂಬ ಗೊಂದಲ ಮುಂದುವರಿದಿರುವ ಸಂದರ್ಭದಲ್ಲೇ ಪ್ರಮುಖ ಮೂರು ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ರಣರಂಗ ಸೃಷ್ಟಿಸಿಕೊಂಡಿದ್ದಾರೆ.
ಕಾಂಗ್ರೆಸ್ ಸಂಸದರಿರುವ ಈ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಬೇಕು ಎಂದು ಸ್ಥಳೀಯ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಮುದ್ದಹನುಮೇಗೌಡರು ಕಳೆದ ಐದು ವರ್ಷಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಬಾರದು ಎಂಬ ಸ್ಥಳೀಯರ ಬೇಡಿಕೆಗೆ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಸಮ್ಮತಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ತುಮಕೂರು ಗ್ರಾಮಾಂತರ, ಗುಬ್ಬಿ, ಮಧುಗಿರಿ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದು, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ತುಮಕೂರು ನಗರವನ್ನು ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿದ್ದಾರೆ. ಮೀಸಲು ಕ್ಷೇತ್ರವಾದ ಕೊರಟಗೆರೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇದ್ದಾರೆ.
ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಾಲ್ವರು ಬಿಜೆಪಿ ಶಾಸಕರಿದ್ದರೆ, ಜೆಡಿಎಸ್ನ ಮೂವರು ಶಾಸಕರಿದ್ದಾರೆ.
ಆದರೆ, ಕಾಂಗ್ರೆಸ್ನಲ್ಲಿ ಕೇವಲ ಒಬ್ಬ ಶಾಸಕರಿರುವುದರಿಂದ ಆ ಪಕ್ಷಕ್ಕೆ ಲೋಕಸಭಾ ಚುನಾವಣೆಯನ್ನು ಗೆಲ್ಲುವ ಸಾಮಥ್ರ್ಯವಿಲ್ಲ. ಹೀಗಾಗಿ ತುಮಕೂರನ್ನು ನಮಗೆ ಬಿಟ್ಟುಕೊಡಿ ಎಂದು ಜೆಡಿಎಸ್ ಮುಖಂಡರು ಪಟ್ಟುಹಿಡಿದಿದ್ದಾರೆ.
ಆದರೆ, ಅದಕ್ಕೆ ಕಾಂಗ್ರೆಸ್ ಪಕ್ಷ ಒಪ್ಪುತ್ತಿಲ್ಲ. ನಮ್ಮ ಪಕ್ಷದ ಶಾಸಕರು ಇಲ್ಲದಿದ್ದರೇನು, ಜಿಲ್ಲೆಯಲ್ಲಿ ನಾವು ಪ್ರಬಲರಾಗಿದ್ದೇವೆ. ಹಾಲಿ ಸಂಸದರು ಉತ್ತಮವಾಗಿ ಕೆಲಸ ಮಾಡುತ್ತಿರುವುದರಿಂದ ನಮ್ಮ ಪಕ್ಷಕ್ಕೆ ಗೆಲುವು ನಿಶ್ಚಿತ ಎನ್ನುವುದು ಕೈ ಮುಖಂಡರ ಅಭಿಪ್ರಾಯ.
ಬಿಜೆಪಿಯ ನಾಲ್ವರು ಶಾಸಕರಿದ್ದರೂ ನಮ್ಮ ಅಭ್ಯರ್ಥಿ ಮುದ್ದಹನುಮೇಗೌಡರಿಗೆ ಜೆಡಿಎಸ್ ಬೆಂಬಲ ನೀಡಿದರೆ ಕೇಸರಿ ಪಡೆಯನ್ನು ನಿರಾಯಾಸವಾಗಿ ಮಣಿಸಬಹುದು ಎಂದು ಕೆಲ ಕಾಂಗ್ರೆಸ್ ಮುಖಂಡರು ಹೈಕಮಾಂಡ್ಗೆ ಸಲಹೆ ನೀಡಿದ್ದಾರೆ.
ಭರವಸೆಯ ಬೆಳಕು: ಕಾಂಗ್ರೆಸ್ ಪಕ್ಷದ ಭದ್ರಕೋಟೆ ತುಮಕೂರನ್ನು ಭೇದಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಈ ಬಾರಿ ಮಾಜಿ ಸಂಸದ ಜಿ.ಎಸ್.ಬಸವರಾಜ್, ಮಾಜಿ ಶಾಸಕ ಸುರೇಶ್ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ ಅವರು ಬಿಜೆಪಿ ಟಿಕೆಟ್ಗಾಗಿ ಲಾಬಿ ಆರಂಭಿಸಿದ್ದಾರೆ.
ಈ ಮೂವರಲ್ಲಿ ಒಬ್ಬರು ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಟಿಕೆಟ್ ವಂಚಿತರನ್ನು ಸಮಾಧಾನಪಡಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಯಾವ ಸೂತ್ರ ಅನುಸರಿಸುತ್ತಾರೋ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು ಪಕ್ಷದ ಆಂತರಿಕ ಕಚ್ಚಾಟವನ್ನು ಶಮನಗೊಳಿಸಲು ಕಸರತ್ತು ನಡೆಸುತ್ತಿದ್ದಾರೆ. ಆದರೆ, ಬಿಜೆಪಿ-ಕೆಜೆಪಿ ಎಂದು ಎರಡು ಭಾಗಗಳಾಗಿ ಇರುವ ಕಾರ್ಯಕರ್ತರನ್ನು ಕಳೆದ ಆರು ವರ್ಷಗಳಿಂದ ಒಂದುಗೂಡಿಸುವ ಪ್ರಯತ್ನ ನಡೆಯಲಿಲ್ಲ. ಆದರೂ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸೊಗಡು ಶಿವಣ್ಣ ಹಾಗೂ ಜಿ.ಎಸ್.ಬಸವರಾಜ್ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಸ್ವಲ್ಪ ಸಮಾಧಾನ ತಂದಿದೆ.
ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಾದರೆ ನಾವೆಲ್ಲ ವೈಮನಸ್ಯ ಬಿಟ್ಟು ಒಮ್ಮತದ ಅಭ್ಯರ್ಥಿ ಪರ ಕೆಲಸ ಮಾಡಿದರೆ ಗೆಲುವು ಸಾಧ್ಯ ಎಂಬುದನ್ನು ಹೈಕಮಾಂಡ್ ಸ್ಥಳೀಯ ಮುಖಂಡರಿಗೆ ಮನವರಿಕೆ ಮಾಡಿಕೊಡಲು ಯಶಸ್ವಿಯಾದರೆ ಈ ಬಾರಿ ತುಮಕೂರಿನಲ್ಲಿ ಬಿಜೆಪಿಗೆ ಭರವಸೆಯ ಬೆಳಕು ಸಿಕ್ಕಂತಾಗುತ್ತದೆ.
ಹೀಗಾಗಿ ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ಈಗಾಗಲೇ ತೀರ್ಮಾನಿಸಿದೆ ಎನ್ನಲಾಗಿದ್ದು, ಕಾಂಗ್ರೆಸ್-ಜೆಡಿಎಸ್ ದೋಸ್ತಿ ಅಭ್ಯರ್ಥಿ ಯಾರು ಎನ್ನುವುದು ಖಚಿತಪಟ್ಟ ನಂತರವಷ್ಟೆ ತಮ್ಮ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ತುಮಕೂರಿನಿಂದ ಸ್ಪರ್ಧಿಸಲು ಸ್ವತಃ ದೇವೇಗೌಡರೇ ಮನಸ್ಸು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಜತೆಗೆ ವಿಧಾನಪರಿಷತ್ ಸದಸ್ಯ ಕಾಂತರಾಜು ಹಾಗೂ ಪಕ್ಷದ ವಕ್ತಾರ ರಮೇಶ್ಬಾಬು ಅವರ ಹೆಸರುಗಳು ಕೇಳಿಬರುತ್ತಿದ್ದು, ಒಂದೆರಡು ದಿನಗಳಲ್ಲಿ ತುಮಕೂರು ಕ್ಷೇತ್ರ ಕಾಂಗ್ರೆಸ್ ಪಾಲಾಗುವುದೋ ಅಥವಾ ಜೆಡಿಎಸ್ಗೆ ಒಲಿಯುವುದೋ ಎಂಬುದು ತಿಳಿಯಲಿದೆ.
ಟಿಕೆಟ್ ಖಚಿತ: ಕಳೆದ ಐದು ವರ್ಷಗಳಿಂದ ಜಿಲ್ಲೆಯಾದ್ಯಂತ ಉತ್ತಮ ಕೆಲಸ ಮಾಡಿರುವ ನನ್ನನ್ನೇ ಈ ಬಾರಿ ದೋಸ್ತಿ ಅಭ್ಯರ್ಥಿಯನ್ನಾಗಿ ಪರಿಗಣಿಸುವುದು ಖಚಿತ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಮುಂದಿನ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ. ಗೆಲುವು ನನ್ನದೇ ಎಂದು ಸಂಸದ ಎಸ್.ಪಿ. ಮುದ್ದಹನುಮೇಗೌಡ ಈ ಸಂಜೆಗೆ ಖಚಿತಪಡಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಮುದ್ದಹನುಮೇಗೌಡ ಹಾಗೂ ಬಿಜೆಪಿಯ ಜಿ.ಎಸ್.ಬಸವರಾಜು ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿದ್ದ ಎ.ಕೃಷ್ಣಪ್ಪ ಪರಾಭವಗೊಳಿಸುತ್ತಾರೆ ಎಂದೇ ಎಲ್ಲ ಭಾವಿಸಿದ್ದರು. ಆದರೆ, ಫಲಿತಾಂಶ ಬರುವ ಮುನ್ನವೇ ಎ.ಕೃಷ್ಣಪ್ಪ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದರು. ಆದರೂ ಅವರು ಚುನಾವಣೆಯಲ್ಲಿ ಎರಡೂವರೆ ಲಕ್ಷ ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ ಬಂದಿರುವ ಜಿ.ಎಸ್.ಬಸವರಾಜು ಜಿಲ್ಲೆಯಲ್ಲಿ ಇನ್ನೂ ಹೆಸರು ಉಳಿಸಿಕೊಂಡಿದ್ದಾರೆ. ಹೀಗಾಗಿ ಅವರ ಹೆಸರು ಮುಂಚೂಣಿಯಲ್ಲಿದ್ದು, ದೋಸ್ತಿ ಪಕ್ಷದ ಅಭ್ಯರ್ಥಿಗೆ ಅವರು ಭಾರೀ ಪೈಪೋಟಿ ನೀಡುವ ಸಾಧ್ಯತೆಗಳಿವೆ.
ಸಂಸದರ ಸಾಧನೆ: ಹಾಲಿ ಸಂಸದರಾಗಿರುವ ಮುದ್ದಹನುಮೇಗೌಡರು ತಮ್ಮ ಅವಧಿಯಲ್ಲಿ 109 ಬಾರಿ ರಾಜ್ಯದ ಹಲವಾರು ಸಮಸ್ಯೆಗಳ ಬಗ್ಗೆ ಸಂಸತ್ ಅಧಿವೇಶನದಲ್ಲಿ ಪ್ರಶ್ನಿಸಿದ್ದಾರೆ. ಈ ವಿಷಯಗಳ ಸರಾಸರಿ ಪ್ರಮಾಣ 45.6, ರಾಷ್ಟ್ರೀಯ ವಿಷಯಗಳ ಸರಾಸರಿ ಪ್ರಮಾಣ 63.8ರಷ್ಟಿದ್ದು, ಇದುವರೆಗೂ ಅವರು ಸಂಸತ್ನಲ್ಲಿ 595 ಪ್ರಶ್ನೆಗಳನ್ನು ಕೇಳಿದ್ದು, ಅವರ ಒಟ್ಟು ಹಾಜರಾತಿ ಪ್ರಮಾಣ ಶೇ.92ರಷ್ಟಿದೆ.
ಒಟ್ಟು ಮತದಾರರು: ಈ ಕ್ಷೇತ್ರದಲ್ಲಿ ಒಟ್ಟು 15,94,703 ಮತದಾರರಿದ್ದು, ಇದರ ಪೈಕಿ 7,97,512 ಪುರುಷ ಹಾಗೂ 7,97,191 ಮಹಿಳಾ ಮತದಾರರಿದ್ದಾರೆ.
ಜನಸಂಖ್ಯೆ ವಿವರ: ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 26.79 ಲಕ್ಷ ಜನಸಂಖ್ಯೆ ಇದೆ. ಪುರುಷರು 13,50,594 ಹಾಗೂ ಮಹಿಳೆಯರು 13,28,386 ರಷ್ಟಿದ್ದಾರೆ. ಜನಸಂಖ್ಯಾ ಏರಿಕೆ ಪ್ರಮಾಣ ಶೇ.3.65ರಷ್ಟಿದೆ.
ಭೌಗೋಳಿಕ ವ್ಯಾಪ್ತಿ: 10,597 ಚ.ಕಿ.ಮೀ., ಲಿಂಗಾನುಪಾತ 1000ಕ್ಕೆ 984ರಷ್ಟಿದೆ.
ಜಿಲ್ಲೆಯಲ್ಲಿ ಶೇ.90.10ರಷ್ಟು ಹಿಂದೂಗಳಿದ್ದರೆ, ಶೇ.9.18ರಷ್ಟು ಮುಸಲ್ಮಾನರಿದ್ದಾರೆ. ಕ್ರಿಶ್ಚಿಯನ್ ಶೇ.0.34, ಸಿಖ್ ಶೇ.0.02, ಬೌದ್ಧರು ಶೇ.0.01, ಜೈನರು ಶೇ.0.19, ಇತರರು ಶೇ.0.01ರಷ್ಟಿದ್ದರೆ ಶೇ.0.16ರಷ್ಟು ಮಾಹಿತಿ ಇಲ್ಲ.