ಹಾಸನ, ಮಾ.13- ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಹಾಸನ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಜೆಡಿಎಸ್ ಹೊರತುಪಡಿಸಿ ಉಳಿದ ಪಕ್ಷಗಳಲ್ಲಿ ಅಭ್ಯರ್ಥಿಗಳ ಹುಡುಕಾಟ ಶುರುವಾಗಿದ್ದರೆ, ಬಿಜೆಪಿ – ಕಾಂಗ್ರೆಸ್‍ನಲ್ಲಿ ಬಂಡಾಯದ ಕೂಗು ಕೇಳಿಬರುತ್ತಿದೆ.
ಚುನಾವಣಾ ಪೂರ್ವ ಜೆಡಿಎಸ್-ಕಾಂಗ್ರೆಸ್ ನಡುವಿನ ಮೈತ್ರಿಗೆ ಸಂಬಂಧಿಸಿದಂತೆ ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಇರಿಸು-ಮುರಿಸು ಉಂಟುಮಾಡಿದೆ.
ಈ ನಡುವೆ ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾಗಿದ್ದಾರೆ. ಇದರಿಂದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಜೆಡಿಎಸ್- ಬಿಜೆಪಿ ನಡುವೆ ಬಿಗ್‍ಫೈಟ್ ಏರ್ಪಡುವ ಸಾಧ್ಯತೆಗಳಿವೆ.
ಬಂಡಾಯದ ಬಿಸಿ:
ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಈಗಾಗಲೇ ತಮ್ಮ ಅಸಮಾಧಾನ ಹೊರ ಹಾಕಿದ್ದು, ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಎ.ಮಂಜು ಸ್ಪರ್ಧಿಸುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯ ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ, ಜಿಲ್ಲೆಯಲ್ಲಿ ಬಂಡಾಯದ ಬಿಸಿ ಎದುರಿಸುವಂತಾಗಿದೆ.
ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹಲವು ಚುನಾವಣೆಗಳಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರ ನಿರ್ಧಾರದ ಬಗ್ಗೆ ಬೇಸರಗೊಂಡಿರುವ ಮಂಜು ಕಾಂಗ್ರೆಸ್ ತೊರೆದು ಮಾತೃ ಪಕ್ಷವಾದ ಬಿಜೆಪಿ ಸೇರಲು ಮುಂದಾಗಿದ್ದಾರೆ.
ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ಸಂಬಂಧ ರಾಜ್ಯ ಬಿಜೆಪಿ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಹೀಗಾಗಿ ಹಾಸನ ಲೋಕಸಭೆ ಚುನಾವಣೆಯಲ್ಲಿ ಮಂಜು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
ದೇವರ ಮೋರೆ: ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರ ಕುಟುಂಬ ದೈವಭಕ್ತರಾಗಿದ್ದು, ಮೂಡಲಹಿಪ್ಪೆಯ ಚನ್ನಕೇಶವ ದೇವಾಲಯ, ಹುಟ್ಟುರಿನ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕವೆ ರಾಜಕೀಯ ಮಾತುಕತೆ ಹಾಗೂ ಪ್ರಚಾರಕ್ಕೆ ಮುಂದಾಗುತ್ತಾರೆ. ಅದರಂತೆ ದೇವೇಗೌಡರ ಕುಟುಂಬದ ಪ್ರತಿ ಸದಸ್ಯರು ಪೂಜೆಯಲ್ಲಿ ಭಾಗಿಯಾಗುತ್ತಾರೆ.
ಜೆಡಿಎಸ್ ಅಭ್ಯರ್ಥಿ ಎಂದೇ ಬಿಂಬಿಸಲಾಗಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಆರಂಭಿಸುವ ಮುನ್ನ ಚನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈಗಾಗಲೇ ಶೃಂಗೇರಿ ಶಾರದಾಂಬೆ ಪೀಠದಲ್ಲೂ ವಿಶೇಷ ಪೂಜೆ ಸಲ್ಲಿಸಿರುವ ಗೌಡರ ಕುಟುಂಬ ರಾಜಕೀಯ ವೃದ್ಧಿಗೆ ಪ್ರರ್ಥಿಸಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಮಾತನಾಡುತ್ತಿರುವ ಎ.ಮಂಜು ಅವರು ಕೂಡ ಚುನಾವಣಾ ಕಣಕ್ಕೆ ಇಳಿಯುವ ಮುನ್ನ ದೇವರ ಮೋರೆ ಹೋಗಿದ್ದಾರೆ. ಹಾಸನದ ಆಂಜನೇಯ ಸ್ವಾಮಿ ದೇವಾಲಯಲ್ಲಿ ಪೂಜೆ ಸಲ್ಲಿಸಿದ್ದಾರೆ.
ಅಲ್ಲದೆ, ಪ್ರಜ್ವಲ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿರುವ ಮಂಜು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಪ್ರತ್ಯುತ್ತರ ನೀಡುವುದಾಗಿಯೂ ಗುಡುಗಿದ್ದಾರೆ.
ಒಟ್ಟಾರೆ ಹಾಸನ ಲೋಕಸಭಾ ಚುನಾವಣೆ ಕಣ ರಂಗೇರತೊಡಗಿದ್ದು, ಹೊಸದಾಗಿ ರಾಜಕೀಯ ಪ್ರವೇಶಿಸಿರುವ ಪ್ರಜ್ವಲ್ ಹಾಗೂ ಮಾಜಿ ಸಚಿವ ಎ.ಮಂಜು ನಡುವೆ ಬಿಗ್ ಫೈಟ್ ನಡೆಯುವುದು ಖಚಿತವೆಂದೇ ರಾಜಕೀಯ ವಲಯದಲ್ಲಿ ಚರ್ಚಿತವಾಗುತ್ತಿದೆ.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸಿದ್ದ ಮಂಜು ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಸೋತಿದ್ದರು.