![nakabandi](http://kannada.vartamitra.com/wp-content/uploads/2019/03/nakabandi-572x381.jpg)
ಬೆಂಗಳೂರು, ಮಾ.13-ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ನಗರದ ಅಷ್ಟದಿಕ್ಕುಗಳಲ್ಲೂ ನಾಕಾಬಂಧಿ ವಿಧಿಸಲಾಗಿದ್ದು, ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಿಂದ ಹೊರ ಹೋಗುವ ಹಾಗೂ ಒಳ ಬರುವ ಪ್ರಮುಖ ರಸ್ತೆಗಳಲ್ಲಿ ನಾಕಾಬಂಧಿ ನಿರ್ಮಿಸಲಾಗಿದ್ದು, ಎಟಿಎಂಗೆ ಹಣ ತುಂಬುವ ವಾಹನಗಳು, ಐಷಾರಾಮಿ ಕಾರುಗಳು ಹಾಗೂ ಬಸ್ಗಳ ತಪಾಸಣೆ ನಡೆಸಲಾಗುವುದು.
ನಿನ್ನೆಯಿಂದಲೇ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದ್ದು,ಇದುವರೆಗೂ ಯಾವುದೇ ಹಣ, ವಸ್ತುಗಳು ಇದುವರೆಗೂ ಪತ್ತೆಯಾಗಿಲ್ಲ. ಹಾಗೆಂದು ಅಧಿಕಾರಿಗಳು ಮೈಮರೆಯುವಂತಿಲ್ಲ. ಚುನಾವಣೆ ಮುಗಿಯುವವರೆಗೂ ಅಧಿಕಾರಿಗಳು ಹದ್ದಿನ ಕಣ್ಣಿಡಬೇಕು. ಮತದಾರರಿಗೆ ಆಮಿಷವೊಡ್ಡುವ ವಸ್ತುಗಳು, ದಾಖಲೆ ಇಲ್ಲದ ಹಣ ದೊರೆತರೆ ಎಂತಹ ಪ್ರಭಾವಿ ವ್ಯಕ್ತಿಯಾಗಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಧಾನಮಂತ್ರಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಶಾಸಕರು ಹಾಗೂ ಜನಪ್ರತಿನಿಧಿಗಳ ಭಾವಚಿತ್ರಗಳಿಗೆ ಈಗಾಗಲೇ ಸ್ಟಿಕ್ಕರ್ಗಳನ್ನು ಅಂಟಿಸಲಾಗಿದೆ. ಯಲಹಂಕ ಹಾಗೂ ರಾಜರಾಜೇಶ್ವರಿ ನಗರದ ಕೆಲವು ಕಡೆ ಇನ್ನೂ ಭಾವಚಿತ್ರಗಳಿಗೆ ಸ್ಟಿಕ್ಕರ್ ಅಂಟಿಸದಿರುವುದರ ಬಗ್ಗೆ ದೂರುಗಳು ಬಂದಿವೆ. ಅಧಿಕಾರಿಗಳು ಇದನ್ನು ಪರಿಶೀಲಿಸಿ ಕೂಡಲೇ ಸ್ಟಿಕ್ಕರ್ ಅಂಟಿಸುವಂತೆ ಸೂಚಿಸಿದರು.
ಯಲಹಂಕ ಹಾಗೂ ರಾಜರಾಜೇಶ್ವರಿ ನಗರದ ಕೆಲವು ವಾರ್ಡ್ಗಳು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತವೆ. ಹಾಗಾಗಿ ಅಧಿಕಾರಿಗಳಲ್ಲಿ ಗೊಂದಲವಿದೆ. ಯಾವುದೇ ಪ್ರದೇಶಕ್ಕೆ ಸೇರ್ಪಡೆಯಾಗಿದ್ದರೂ ಕಟ್ಟುನಿಟ್ಟಿನ ಕ್ರಮಕೈಗೊಂಡು ಸ್ಟಿಕ್ಕರ್ ಅಂಟಿಸಬೇಕೆಂದು ಸೂಚಿಸಿದ್ದಾರೆ.
ಒಟ್ಟಾರೆ ಮೂರು ಲೋಕಸಭಾ ಕ್ಷೇತ್ರ ಒಳಗೊಂಡಿರುವ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಆಮಿಷ, ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಸಭೆ, ಸಮಾರಂಭಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಈ ಸಮಯದಲ್ಲಿ ಮತದಾರರಿಗೆ ಆಮಿಷ ವೊಡ್ಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.