ಲಕ್ನೋ: ಮುಂಬರುವ ಲೋಕಸಭೆ ಚುನಾವಣೆಗಾಗಿ ಉತ್ತರಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ನಡುವೆ ಮೈತ್ರಿ ಮಾಡಿಕೊಳ್ಳಲಾಗಿದ್ದು, ಎಸ್ಪಿ ಮುಖ್ಯಸ್ಥ ಅಖಿಲೇಶ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಇಬ್ಬರೂ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.
ಈ ಬಗೆಗಿನ ಗೊಂದಲ ಈಗಲೂ ಮುಂದುವರೆದಿದ್ದು, ಮಾಯಾವತಿ ನಾಗಿನ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಬಿಎಸ್ಪಿ ಮುಖ್ಯಸ್ಥೆ ಈಗ ಅಂಬೇಡ್ಕರ್ ನಗರ ಅಥವಾ ಬಿಜನೌರ್ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ನಿರೀಕ್ಷಿಸಲಾಗಿದೆ. 1989 ರಲ್ಲಿ ಮಾಯಾವತಿ ಅವರು ಬಿಜ್ನೋರ್ನಿಂದ ಸ್ಪರ್ಧಿಸಿದ್ದರು. ಇಲ್ಲಿಂದ ಸಂಸತ್ ಸದಸ್ಯರಾಗಿ ಪಾರ್ಲಿಮೆಂಟ್ ಮೆಟ್ಟಿಲೇರಿದ್ದರು.
ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕನೌಜ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಆದರೆ ಇದೀಗ ಅಖಿಲೇಶ್ ತಮ್ಮ ಪತ್ನಿಯನ್ನು ಆ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದ್ದು, ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಮುಲಾಯಂ ಸಿಂಗ್ ಯಾದವ್ ಅವರ ಅಜಮ್ಗಢ್ ಕ್ಷೇತ್ರದಿಂದ ಸ್ಪರ್ಧಿಸಲು ಸಾಧ್ಯವಿದೆ. ವಾಸ್ತವವಾಗಿ, ಸಮಾಜವಾದಿ ಪಕ್ಷವು 9 ಅಭ್ಯರ್ಥಿಗಳನ್ನು ಘೋಷಿಸಿದೆ.
ಇನ್ನು ಎಸ್ಪಿ-ಬಿಎಸ್ಪಿ ಮೈತ್ರಿಕೂಟವು ಗೆಲ್ಲುವ ಕುದುರೆಗಳಿಗೆ ಟಿಕೆಟ್ ನೀಡಲು ಸಿದ್ದತೆ ನಡೆಸಿದ್ದು, ಅಭ್ಯರ್ಥಿಗಳ ಹೆಸರು ಬಹುತೇಕ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.