ಮನೆಗಳ ಮೇಲೆ ಹಾಕಿರುವ ಬಿಜೆಪಿ ಬಾವುಟಗಳನ್ನು ತೆಗೆಯುವ ವಿಚಾರ-ಚುನಾವಣಾಧಿಕಾರಿಗಳು ಮತ್ತು ಮನೆ ಮಾಲೀಕರ ನಡುವೆ ಮಾತಿನ ಚಕಮಕಿ

ಮೈಸೂರು, ಮಾ.13- ಮನೆಗಳ ಮೇಲೆ ಬಿಜೆಪಿ ಬಾವುಟ ಹಾಕಿರುವುದನ್ನು ತೆಗೆಸಲು ಮುಂದಾದ ಚುನಾವಣಾಧಿಕಾರಿಗಳು ಮತ್ತು ಮನೆ ಮಾಲೀಕರ ನಡುವೆ ಮಾತಿನ ಚಕಮಕಿ ನಡೆದಿದೆ.

ನಗರದ ಅಗ್ರಹಾರ ಕಾಲೋನಿಯ ಹಲವಾರು ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಿಸಲಾಗಿದೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇದನ್ನು ಗಮನಿಸಿದ ಸೆಕ್ಟರ್ ಅಧಿಕಾರಿ ವೆಂಕಟೇಶ್ ಅವರು ಸ್ಥಳೀಯ ನಿವಾಸಿ ಪ್ರಭುಸ್ವಾಮಿ ಮನೆ ಮೇಲೆ ಹಾಕಿದ್ದ ಬಿಜೆಪಿ ಬಾವುಟ ತೆರವುಗೊಳಿಸಲು ಹೇಳಿದ್ದಾರೆ.

ಆದರೆ, ಪ್ರಭುಸ್ವಾಮಿ ಇದಕ್ಕೆ ಪ್ರತಿರೋಧವೊಡ್ಡಿ, ಚುನಾವಣಾ ಆಯೋಗ ಮನೆಗಳ ಮೇಲಿನ ಬಾವುಟ ತೆರವುಗೊಳಿಸಲು ಹೇಳಿಲ್ಲ. ಒಂದು ವೇಳೆ ಹೇಳಿದ್ದರೆ ನೋಟಿಸ್ ಹೊರಡಿಸಿ ಆಗ ತೆಗೆಯುತ್ತೇನೆ, ನಾನು ಬಿಜೆಪಿ ಅಭಿಮಾನಿ. ಹಾಗಾಗಿ ಮನೆ ಮೇಲೆ ಬಿಜೆಪಿ ಬಾವುಟ ಹಾಕಿದ್ದೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ತಿಳಿಸುವುದಾಗಿ ಸೆಕ್ಟರ್ ಅಧಿಕಾರಿ ಸ್ಥಳದಿಂದ ನಿರ್ಗಮಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ