
ಬೆಂಗಳೂರು, ಮಾ.12- ತೀವ್ರ ಕಗ್ಗಂಟಾಗಿ ಪರಿಣಮಿಸಿರುವ ಕೆಲವು ಲೋಕಸಭೆ ಚುನಾವಣೆಗೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ವಿವಿಧ ಜಿಲ್ಲಾ ಮುಖಂಡರ ಜತೆ ಸಮಾಲೋಚನೆ ಸಭೆ ನಡೆಸಿದರು.
ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಬಳ್ಳಾರಿ, ಚಿಕ್ಕೋಡಿ, ಬೆಂಗಳೂರು ದಕ್ಷಿಣ, ಉಡುಪಿ-ಚಿಕ್ಕಮಗಳೂರು, ರಾಯಚೂರು, ಬೀದರ್, ಕಲಬುರ್ಗಿ ಸೇರಿದಂತೆ ಮತ್ತಿತರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವಿವಿಧ ಮುಖಂಡರಿಂದ ಬಿಎಸ್ವೈ ಅಭಿಪ್ರಾಯವನ್ನು ಸಂಗ್ರಹಿಸಿದರು.
ಬೀದರ್ ಸಂಸದ ಭಗವಂತ್ ಖೂಬಾ, ಕಲಬುರ್ಗಿ ಲೋಕಸಭಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಉಮೇಶ್ಜಾಧವ್, ಶಾಸಕರಾದ ಶಿವನಗೌಡ ನಾಯಕ್, ರಾಜುನಾಯಕ್ ಸೇರಿದಂತೆ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಪ್ರಮುಖವಾಗಿ ಬಳ್ಳಾರಿಗೆ ಈ ಬಾರಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ.
ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್, ಮಾಜಿ ಸಚಿವ ರಮೇಶ್ಜಾರಕಿಹೊಳಿ ಸಹೋದರ ಲಕನ್ ಜಾರಕಿಹೊಳಿ, ಮಾಜಿ ಶಾಸಕ ಸುರೇಶ್ಬಾಬು, ಮಾಜಿ ಸಂಸದ ಸಣ್ಣಪಕೀರಪ್ಪ ಸೇರಿದಂತೆ ಮತ್ತಿತರರಿಗೆ ಟಿಕೆಟ್ ನೀಡುವ ಬಗ್ಗೆ ಸ್ಥಳೀಯರ ನಾಯಕರಿಂದ ಯಡಿಯೂರಪ್ಪ ಅಭಿಪ್ರಾಯ ಸಂಗ್ರಹಿಸಿದರು.
ಇದೇ 18ರಂದು ಬಿಜೆಪಿಯ ಅಂತಿಮ ಪಟ್ಟಿ ಪ್ರಕಟಗೊಳಿಸಲಿದ್ದು, ಅಷ್ಟರೊಳಗೆ ರಾಜ್ಯದ 28 ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುಂವತೆ ಕೇಂದ್ರ ವರಿಷ್ಠರು ಎಲ್ಲಾ ರಾಜ್ಯ ನಾಯಕರು ಸೂಚನೆ ಕೊಟ್ಟಿದ್ದಾರೆ.
ಕಳೆದ ವಾರ ನವದೆಹಲಿಗೆ ತೆರಳಿದ್ದ ಯಡಿಯೂರಪ್ಪ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ 28 ಲೋಕಸಭಾ ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟಿಯನ್ನು ನೀಡಿದ್ದರು. ಹಾಲಿ 15 ಬಿಜೆಪಿ ಸಂಸದರಿಗೆ ಬಹುತೇಕ ಟಿಕೆಟ್ ನೀಡುವುದು ಖಾತರಿಯಾಗಿದ್ದು, ಹೆಚ್ಚಿನ ಬದಲಾವಣೆ ಮಾಡದಿರಲು ಪಕ್ಷ ತೀರ್ಮಾನಿಸಿದೆ. ಉಳಿದಂತೆ ಹಾಸನ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದರೆ ಅವರನ್ನೇ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ.
ಇನ್ನು ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಅವರಿಗೆ ಬೆಂಬಲ ನೀಡುವುದು, ಇಲ್ಲವೇ ಕೊನೆಕ್ಷಣದಲ್ಲಿ ಅಚ್ಚರಿಯ ಬದಲಾವಣೆಯಾಗಿ ಈ ಕ್ಷೇತ್ರವನ್ನು ಕಾಂಗ್ರೆಸ್ ತನ್ನಲ್ಲೇ ಉಳಿಸಿಕೊಂಡು ಸುಮಲತಾಗೆ ಮಣೆ ಹಾಕಿದರೆ ಬಳಿಕ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ.
ಚಾಮರಾಜನಗರದಿಂದ ಮಾಜಿ ಸಚಿವರಾದ ಎಂ.ಶಿವಣ್ಣ, ವಿ.ಶ್ರೀನಿವಾಸ್ ಪ್ರಸಾದ್, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ, ಕೋಲಾರ ಮೀಸಲು ಕ್ಷೇತ್ರದಿಂದ ಡಿ.ಎಸ್.ವೀರಯ್ಯ, ಚಿ.ನಾ.ರಾಮು, ಛಲವಾದಿ ನಾರಾಯಣಸ್ವಾಮಿ, ಚಿತ್ರದುರ್ಗದಿಂದ ಮಾಜಿ ಸಂಸದ ಜನಾರ್ಧನಸ್ವಾಮಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಅಂತಿಮವಾಗಿ ಜಿಲ್ಲಾ ಘಟಕದಿಂದ ಅಭಿಪ್ರಾಯ ಸಂಗ್ರಹಿಸಿ ಸರ್ವಸಮ್ಮತದ ಅಭ್ಯರ್ಥಿಯನ್ನು ಕೇಂದ್ರ ಚುನಾವಣಾ ಸಮಿತಿಗೆ ಯಡಿಯೂರಪ್ಪ ಕಳುಹಿಸಲಿದ್ದಾರೆ.
ದೇಶಾದ್ಯಂತ ಇದೇ 18ರಂದು ಬಿಜೆಪಿ ಮೊದಲ ಹಂತದಲ್ಲಿ ಸುಮಾರು 200ಕ್ಕೂ ಹಾಲಿ ಸಂಸದರಿರುವ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.