ಬೆಂಗಳೂರು, ಮಾ.12-ರಾಜ್ಯದಲ್ಲಿ ಲೋಕಸಭೆ ಚುನಾವಣೆ ದಿನಾಂಕ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಅನರ್ಹತೆಯ ಭೀತಿ ಎದುರಿಸುತ್ತಿದ್ದ ನಾಲ್ವರು ಶಾಸಕರ ವಿಚಾರಣೆಯನ್ನು ಮುಂದೂಡಲಾಗಿದೆ.
ನೀತಿ ಸಂಹಿತೆ ಜಾರಿಯಾಗಿರುವ ಕಾರಣ ಇಂದು ಶಾಸಕರಾದ ಡಾ.ಉಮೇಶ್ ಜಾಧವ್, ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ ಮತ್ತು ಮಹೇಶ್ ಕುಮಟಳ್ಳಿ ಅವರುಗಳ ಅನರ್ಹತೆ ಅರ್ಜಿ ವಿಚಾರಣೆಯನ್ನು ವಿಧಾನಸಭೆಯ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಕೆಲ ದಿನಗಳ ಮಟ್ಟಿಗೆ ಮುಂದೂಡಿದ್ದಾರೆ.
ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿರುವ ಡಾ.ಉಮೇಶ್ಜಾಧವ್ ಅವರ ರಾಜೀನಾಮೆ ಅಂಗೀಕಾರವಾಗಲಿದೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.
ಈ ನಾಲ್ವರು ಶಾಸಕರಿಗೆ ಇಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಸ್ಪೀಕರ್ ರಮೇಶ್ಕುಮಾರ್ ಕಳೆದ ವಾರ ನೋಟೀಸ್ ಜಾರಿ ಮಾಡಿದ್ದರು. ಒಂದೆಡೆ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆನೀಡಿ ಒಂದು ವಾರ ಕಳೆಯುತ್ತಾ ಬಂದಿದ್ದರೂ ಈವರೆಗೂ ಅಂಗೀಕಾರವಾಗಿಲ್ಲ.
ಅಲ್ಲದೆ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಈ ನಾಲ್ವರು ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ಸ್ಪೀಕರ್ಗೆ ದೂರು ನೀಡಿತ್ತು. ಇಂದು ಅರ್ಜಿ ವಿಚಾರಣೆ ನಡೆದ ನಂತರ ಯಾವುದಾದರೂ ನಿರ್ಧಾರವನ್ನು ಸ್ಪೀಕರ್ ಪ್ರಕಟಿಸಲಿದ್ದಾರೆ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಅರ್ಜಿ ವಿಚಾರಣೆಯನ್ನು ಸ್ಪೀಕರ್ ಮುಂದೂಡಿರುವುದು ಅನರ್ಹತೆ ಭೀತಿ ಎದುರಿಸುತ್ತಿದ್ದ ಶಾಸಕರು ತೂಗುಗತ್ತಿಯಿಂದ ಸದ್ಯಕ್ಕೆ ಪಾರಾಗಿದ್ದಾರೆ.
ಜಾಧವ್ ಹಾದಿ ಸುಗಮ:
ಕಲಬುರಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಉಮೇಶ್ಜಾಧವ್ ತಮ್ಮ ಶಾಸಕ ಸ್ಥಾನಕ್ಕೆ ಕಳೆದ ವಾರ ರಾಜೀನಾಮೆ ನೀಡಿದ್ದರು. ಆದರೆ ಈವರೆಗೂ ಸ್ಪೀಕರ್ ರಾಜೀನಾಮೆಯನ್ನು ಅಂಗೀಕರಿಸಿಯೂ ಇಲ್ಲ, ತಿರಸ್ಕರಿಸಿಯೂ ಇಲ್ಲ. ಹೀಗಾಗಿ ಅವರ ನಿಲುವು ಏನೆಂಬುದು ದೃಢಪಟ್ಟಿಲ್ಲ. ಯಾವುದೇ ಒಬ್ಬ ಶಾಸಕ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದೇನೆಂದು ಪತ್ರದಲ್ಲಿ ಉಲ್ಲೇಖ ಮಾಡಿದಾಗ ಅದನ್ನು ಹೆಚ್ಚು ದಿನ ವಿಳಂಬ ಮಾಡದೆ ಅಂಗೀಕರಿಸಲೇಬೇಕಾಗುತ್ತದೆ.
ಈಗ ಸ್ಪೀಕರ್ ವಿಳಂಬ ಮಾಡಿದಷ್ಟೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅವರ ಹಾದಿ ಬಹುತೇಕ ಸುಗಮವಾದಂತಿದೆ.
ಮೂಲಗಳ ಪ್ರಕಾರ ಮೂರ್ನಾಲ್ಕು ದಿನಗಳಲ್ಲಿ ಕಲಬುರಗಿ ಜಿಲ್ಲೆಯಿಂದ ಕಾಂಗ್ರೆಸ್ ನಾಯಕ ಎಂ.ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಉಮೇಶ್ ಜಾಧವ್ ಅಖಾಡಕ್ಕಿಳಿಯಲಿದ್ದಾರೆ.
ಒಂದು ವೇಳೆ ಜಾಧವ್ ರಾಜೀನಾಮೆ ಅಂಗೀಕಾರವಾದರೆ ರಮೇಶ್ಜಾರಕಿ ಹೊಳಿ, ಬಿ.ನಾಗೇಂದ್ರ, ಮಹೇಶ್ಕುಮಟಳ್ಳಿ ಶಾಸಕರ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಬಳ್ಳಾರಿ ಜಿಲ್ಲೆ ಕಂಪ್ಲಿ ಶಾಸಕ ಜೆ.ಗಣೇಶ್ ಸೇರಿದಂತೆ ಇನ್ನೂ ಕೆಲವರು ಕಾಂಗ್ರೆಸ್ಗೆ ಬೈ ಬೈ ಹೇಳಲು ಸಿದ್ದರಾಗಿದ್ದರು. ಆದರೆ ಅನರ್ಹತೆಯ ತೂಗುಗತ್ತಿ ಎದುರಾಗಿರುವುದರಿಂದ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.