ಬೆಂಗಳೂರು, ಮಾ.12- ರೌಡಿ ಲಕ್ಷ್ಮಣನ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ.
ಹೇಮಂತ್ ಅಲಿಯಾಸ್ ಹೇಮಿ (32) ಸಿಸಿಬಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಕೊಲೆ ಆರೋಪಿ. ಮುದ್ದಯ್ಯನಪಾಳ್ಯದ ನಿವಾಸಿಯಾದ ಆರೋಪಿ ಹೇಮಂತ್ ರಾಮನಗರ, ಚನ್ನಪಟ್ಟಣದಲ್ಲಿ ರೌಡಿ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದು, ಈತನ ಮೇಲೆ ಕೊಲೆ, ಬೆದರಿಕೆ ಸೇರಿದಂತೆ ಆರು ಪ್ರಕರಣಗಳಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾ.7ರಂದು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲೇ ನಡೆದಿದ್ದ ರೌಡಿ ಲಕ್ಷ್ಮಣನ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ನಗರ ಪೊಲೀಸ್ ಆಯುಕ್ತರು ಆರೋಪಿಗಳನ್ನು ಬಂಧಿಸುವಂತೆ ಸಿಸಿಬಿಗೆ ಸೂಚಿಸಿದ್ದರು.
ಸಿಸಿಬಿ ಪೊಲೀಸರು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾಗ ಲಕ್ಷ್ಮಣ್ ಕೊಲೆ ಪ್ರಕರಣದ ಆರೋಪಿ ಹೇಮಂತ್ ಅನ್ನಪೂರ್ಣೇಶ್ವರಿ ನಗರದ ಹನುಮಗಿರಿ ದೇವಸ್ಥಾನದ ಬಳಿ ಇರುವ ಬಗ್ಗೆ ಮಾಹಿತಿ ಲಭಿಸಿದೆ.
ಖಚಿತ ಸುಳಿವಿನ ಮೇರೆಗೆ ಇಂದು ಮುಂಜಾನೆ 5.45ರ ಸಮಯದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಹರೀಶ್ ಮತ್ತು ಅವರ ಸಿಬ್ಬಂದಿಯವರು ಅಲ್ಲಿಗೆ ತೆರಳಿದ್ದಾರೆ.
ಆಗ ಸಿಸಿಬಿ ಕಾನ್ಸ್ಟೆಬಲ್ ಆನಂದ್ ಅವರು ಹೇಮಂತ್ನನ್ನು ಹಿಡಿಯಲು ಹೋದ ಸಂದರ್ಭದಲ್ಲಿ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.
ತಕ್ಷಣ ಇನ್ಸ್ಪೆಕ್ಟರ್ ಹರೀಶ್ ಅವರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿ ಹೇಮಂತ್ಗೆ ಸೂಚಿಸಿದ್ದಾರೆ.
ಇನ್ಸ್ಪೆಕ್ಟರ್ ಅವರ ಮಾತನ್ನು ಲೆಕ್ಕಿಸದೆ ಪ್ರತಿರೋಧವೊಡ್ಡಿ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಹರೀಶ್ ಅವರು ಹಾರಿಸಿದ ಗುಂಡು ಆರೋಪಿ ಹೇಮಂತ್ ಬಲಗಾಲಿಗೆ ತಗುಲಿದ ಪರಿಣಾಮ ಕುಸಿದುಬಿದ್ದಿದ್ದಾನೆ.
ತಕ್ಷಣ ಪೊಲೀಸರು ಸುತ್ತುವರಿದು ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.