ಮೈಸೂರು, ಮಾ.12- ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಸಿದ್ಧತೆಗಳು ಒಳಗೊಳಗೇ ನಡೆಯುತ್ತಿವೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೋ ಅಥವಾ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೋ ಎಂಬುದು ಕುತೂಹಲ ಮೂಡಿಸಿದೆ. ಹಾಗಾಗಿ ಸಮ್ಮಿಶ್ರ ಸರ್ಕಾರದ ಒಮ್ಮತ ಅಭ್ಯರ್ಥಿ ಯಾರು ಎಂಬುದು ಇನ್ನೂ ಪಕ್ಕಾ ಆಗಿಲ್ಲ.
ಒಂದು ವೇಳೆ ಸಿದ್ದು ಪಟ್ಟು ಬದಲಿಸದಿದ್ದರೆ ಹೇಗೆ ಎಂಬುದನ್ನು ಜೆಡಿಎಸ್ನವರು ಚಿಂತಿಸುವಂತಾಗಿದೆ. ಜೆಡಿಎಸ್ನವರಿಗೆ ಮೈಸೂರನ್ನು ಬಿಟ್ಟುಕೊಡದಂತೆ ಕಾಂಗ್ರೆಸ್ನ ಬಹುತೇಕ ಮುಖಂಡರು ಹಾಗೂ ನಾಯಕರ ಒಕ್ಕೊರಲ ಒತ್ತಾಯವಾಗಿದೆ.
ಏತನ್ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಚಿವ ಸಾ.ರಾ.ಮಹೇಶ್ ಅವರು ಮೈಸೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಲಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಜೆಡಿಎಸ್ ವರಿಷ್ಠರಾದ ದೇವೇಗೌಡರು ತಾನು ಮೈಸೂರಿನಿಂದ ಸ್ಪರ್ಧಿಸಬಯಸುತ್ತೇನೆಂದು ಎಲ್ಲಿಯೂ ಹೇಳಿಲ್ಲ.
ಜೆಡಿಎಸ್-ಕಾಂಗ್ರೆಸ್ ನಡೆ ಹೀಗಾದರೆ, ಬಿಜೆಪಿಯಲ್ಲಿ ಮತ್ತೊಂದು ರೀತಿಯಲ್ಲಿ ಒಳ ರಾಜಕೀಯ ನಡೆಯುತ್ತಿದೆ.
ಈ ಬಾರಿಯೂ ನಾನೇ ಬಿಜೆಪಿ ಅಭ್ಯರ್ಥಿ ಎಂದು ಸಂಸದ ಪ್ರತಾಪ್ಸಿಂಹ ಹೇಳುತ್ತಿದ್ದರೂ ಸಹ ಇವರೇ ಅಭ್ಯರ್ಥಿ ಎಂದು ಪಕ್ಷ ಆಧಿಕೃತವಾಗಿ ಘೋಷಿಸಿಲ್ಲ.
ಪ್ರತಾಪ್ಸಿಂಹ ಬದಲು ಬೇರೆ ಅಭ್ಯರ್ಥಿಗೆ ಅವಕಾಶ ಕಲ್ಪಿಸಬೇಕೆಂಬ ಮಾತುಗಳು ಕೇಳಿಬಂದಿವೆ.
ಈ ಹಿನ್ನೆಲೆಯಲ್ಲಿ ಇನ್ನೂ ಸಹ ಬಿಜೆಪಿಯಿಂದ ಪ್ರತಾಪ್ಸಿಂಹ ಸ್ಪರ್ಧಿಸುವುದು ಖಚಿತವಾಗಿಲ್ಲ.
ಇನ್ನು ಜೆಡಿಎಸ್ ವಿಚಾರಕ್ಕೆ ಬರುವುದಾದರೆ ಮೈಸೂರು-ಕೊಡಗು ಕ್ಷೇತ್ರವನ್ನು ತಮಗೇ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದಿದೆ. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರವಾಗಿರುವ ಮೈಸೂರನ್ನು ಜೆಡಿಎಸ್ಗೆ ಬಿಟ್ಟುಕೊಡಲು ಒಪ್ಪುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ತೀವ್ರ ಗೊಂದಲ ಉಂಟಾಗಿದೆ.
ತಮ್ಮ ಪಕ್ಷದ ಅಭ್ಯರ್ಥಿ ಕಣಕ್ಕಿಳಿಯಬೇಕೆಂದು ಕಾಂಗ್ರೆಸ್ನವರು ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತಿದ್ದರೆ, ಜೆಡಿಎಸ್ನವರು ಮೈಸೂರನ್ನು ತಮಗೇ ಬಿಟ್ಟುಕೊಡಬೇಕೆಂದು ಪಟ್ಟುಹಿಡಿದಿದ್ದಾರೆ.
ಹಾಗಾಗಿ ಮೈಸೂರಿನಿಂದ ಕಾಂಗ್ರೆಸ್ನವರು ಸ್ಪರ್ಧಿಸಲಿದ್ದಾರೋ ಅಥವಾ ಜೆಡಿಎಸ್ನವರು ಸ್ಪರ್ಧಿಸಲಿದ್ದಾರೋ ಎಂಬುದು ಯಕ್ಷಪ್ರಶ್ನೆಯಾಗಿದೆ.